ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಬೇಲಿಯ ಬಳಿ ನಿನ್ನೆ ಪತ್ತೆಯಾದ ಐದು ಗ್ರೆನೇಡ್‌ಗಳು ಸೇನಾ ಫ್ಯಾಕ್ಟರಿಯಲ್ಲೇ ತಯಾರಾಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಳಂತಿಲ ಗ್ರಾಮದ ನಿವೃತ್ತ ಸೇನಾಧಿಕಾರಿ ಜಯಕುಮಾರ್ ಪೂಜಾರಿ ಅವರು ಉಪ್ಪಿನಂಗಡಿಯಿಂದ ಸಂಜೆ 6 ಗಂಟೆ ಸುಮಾರಿಗೆ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಗ್ರೆನೇಡ್‌ಗಳು ಕಂಡಿವೆ. ನಂತರ ಅವುಗಳನ್ನು ಇತರರಿಗೆ ತೊಂದರೆ ಆಗದಂತೆ ಸುರಕ್ಷಿತವಾಗಿ ಬದಿಗಿರಿಸಿದ ಅವರು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ನೆರವಿನೊಂದಿಗೆ ಆಗಮಿಸಿದ ಸಿಬ್ಬಂದಿ ಎಲ್ಲಾ ಗ್ರೆನೇಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದರು.
ಈ ಗ್ರೆನೇಡ್‌ಗಳು ಸುಮಾರು 40 ವರ್ಷಗಳಷ್ಟು ಹಳೆಯದಾಗಿದ್ದು, 1979-83 ಎಂಬ ದಿನಾಂಕ ಇದರಲ್ಲಿ ಗೋಚರಿಸುತ್ತಿದೆ. ಈಗಾಗಲೇ ಜಯಕುಮಾರ್ ಅವರು ನೀಡಿರುವ ದೂರಿನನ್ವಯ ಶಸ್ತ್ರಾಸ್ತ್ರಗಳ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಈ ಬಗ್ಗೆ ಭಾರತೀಯ ಸೇನಾ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಜಯಕುಮಾರ್ ಅವರು ಭೂಸೇನಾ ರೆಜಿಮೆಂಟ್‌ನಲ್ಲಿ ಎಸ್‌ಸಿಒ ಆಗಿ ನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೆನೇಡ್‌ಗಳ ಬಗ್ಗೆ ಅವರಿಗೆ ತಿಳುವಳಿಕೆ ಇರುವುದರಿಂದ ಇದರ ಗಂಭೀರತೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ED ವಶಕ್ಕೆ