ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಕಾರ್ಯಾಚರಣೆಗಳನ್ನು ಸರಳಗೊಳಿಸಲಾಗಿದ್ದು, ಜ್ವರ, ಕೆಮ್ಮು, ಶೀತ, ಉಸಿರಾಟ ಮುಂತಾದ ತೊಂದರೆ ಇತ್ಯಾದಿಗಳನ್ನು ಹೊರತುಪಡಿಸಿ, ‘ಎಸ್‌ಒಪಿ2’ ನಿತ್ಯದ ತಪಾಸಣೆ ಸ್ಥಗಿತಗೊಳಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಭಾರತ ಸರಕಾರದಿಂದ ಸೂಚಿಸಲಾಗಿರುವ ಆಯ್ದ ದೇಶಗಳಿಂದ ವಿಮಾನ ನಿಲ್ದಾಣಕ್ಕೆ ಅಗಮಿಸುವ ಪ್ರಯಾಣಿಕರನ್ನು ಹೊರತುಪಡಿಸಿ, ಉಳಿದ ಪ್ರಯಾಣಿಕರ ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಪರಿಶೀಲನೆಯನ್ನು ಸ್ಥಗಿತಗೊಳಿಸಲಾಗಿದೆ.
ಅದಕ್ಕೆ ಬದಲಾಗಿ, ಪ್ರಯಾಣಿಕರು ಏರ್ ಸುವಿಧಾ ಪೋರ್ಟಲ್‌ನಲ್ಲಿ ಆರ್‌ಟಿಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕಾಗುತ್ತದೆ. ಆ ಪರೀಕ್ಷಾ ವರದಿಗಳನ್ನು ಸಂಬಂಧಿತ ಏರ್‌ಲೈನ್ಸ್ ಸಂಸ್ಥೆಯು ಪ್ರಯಾಣಿಕರ ಬೋರ್ಡಿಂಗ್‌ನ ಮುಂಚಿತವಾಗಿ ಪರಿಶೀಲಿಸಬೇಕಾಗುತ್ತದೆ. ಸ್ವಯಂಚಾಲಿತ ಥರ್ಮಲ್ ಕ್ಯಾಮರಾಗಳ ಮೂಲಕ ಪ್ರಯಾಣಿಕರ ಮೇಲ್ವಿಚಾರಣೆ ನಡೆಸಬೇಕು.
ಯುನೈಟೆಡ್ ಕಿಂಗ್‌ಡಮ್‌ನಿಂದ ಆಗಮಿಸುವವರಿಗೆ ಕ್ವಾರಂಟೈನ್ ವಿಚಾರಕ್ಕೆ ಸಂಬಂಧಿಸಿದಂತೆ, ಭಾರತ ಸರಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ಅಲ್ಲದೆ, ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕ ಸ್ಪಷ್ಟೀಕರಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.