ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆಟೋ ಚಾಲಕನ ವಿಚಾರಣೆ ನಡೆಯುತ್ತಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸಂಶಯದ ಮೇಲೆ ಹಲವರನ್ನು ಪ್ರಶ್ನಿಸಲಾಗಿದ್ದು, ಹಲವೆಡೆ ಶೋಧಕಾರ್ಯ ನಡೆಸಲಾಗಿದೆ. ಬ್ಯಾಗ್ ತಂದಿಟ್ಟ ಶಂಕಿತನಿಗೂ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ಗೆ ಬೆದರಿಕೆ ಕರೆ ಮಾಡಿದ ವ್ಯಕ್ತಿಗೂ ಸಾಮ್ಯತೆ ಇದೆಯೇ ಎಂಬುದರ ಬಗ್ಗೆಯೂ ವಿಚಾರಣೆ ನಡೆಸಲಾಗ್ತಿದೆ ಎಂದರು.
ದೇಶ, ರಾಜ್ಯದ ಬೇರೆ, ಬೇರೆ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಹಾಕಿದವರ ಚಹರೆಯನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ವಿಮಾನ ನಿಲ್ದಾಣದಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಶಂಕಿತನ ಭಾವಚಿತ್ರಕ್ಕೆ ಹೋಲುವ ವ್ಯಕ್ತಿ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ. ತನಿಖಾ ತಂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ವಿಮಾನ ನಿಲ್ದಾಣ ಸುಸ್ಥಿತಿಯಲ್ಲಿದೆ. ನಿಷ್ಕ್ರೀಯ ಮಾಡಿದ ಬಾಂಬ್ ಸ್ಫೋಟಕದ ಮಾದರಿಯನ್ನು ಬಾಂಬ್ ನಿಷ್ಕ್ರಿಯ ದಳ ಎಫ್ಎಸ್ಎಲ್‌ಗೆ ಕಳುಹಿಸಿದೆ. ವರದಿಯಲ್ಲಿ ಬಾಂಬ್‌ನ ಸಾಮರ್ಥ್ಯ ಮತ್ತು ಯಾವ ರೀತಿಯ ಬಾಂಬ್ ಎಂದು ತಿಳಿಯಲಿದೆ. ಮೇಲ್ನೋಟಕ್ಕೆ ಇದೊಂದು ಕಚ್ಚಾ ಸ್ಫೋಟಕ ಎಂದು ಬಾಂಬ್ ನಿಷ್ಕ್ರೀಯ ದಳ ಅಭಿಪ್ರಾಯಪಟ್ಟಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.