ಮಂಗಳೂರು: ಅನ್ಯಜಾತಿಯ ಪ್ರಿಯತಮೆ ಜೊತೆಗೆ ಮದುವೆಗೆ ವಿರೋಧಿಸಿದ ತಂದೆಯನ್ನು ಕೊಂದ ಮಗನಿಗೆ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 2021ರ ಜನವರಿ 18ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಂಡ್ಯೊಟ್ಟು ಎಂಬಲ್ಲಿ ಶ್ರೀಧರ ಪೂಜಾರಿ ಎಂಬವರನ್ನು ಮಗ ಹರೀಶ ಪೂಜಾರಿ ಕೊಲೆ ಮಾಡಿದ್ದ.
ಹರೀಶ್ ಪೂಜಾರಿ ಅನ್ಯಜಾತಿಯ ಹುಡುಗಿಯನ್ನು ವಿವಾಹವಾಗಿದ್ದಕ್ಕೆ ತಂದೆ ಶ್ರೀಧರ ಪೂಜಾರಿ ವಿರೋಧ ವ್ಯಕ್ತಪಡಿಸಿದ್ದರು. ಈ ದ್ವೇಷಕ್ಕೆ ಗಲಾಟೆ ನಡೆಸಿ ಮರದ ಪಕ್ಕಾಸಿನ ತುಂಡಿನಿಂದ ತಂದೆಗೆ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ಐ ನಂದಕುಮಾರ್ ಎಂ.ಎಂ. ಪ್ರಕರಣ ದಾಖಲಿಸಿಕೊಂಡಿದ್ದರು. ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ ಜಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಯ ಮೇಲಿನ ಆರೋಪ ಸಾಬೀತಾಗಿತ್ತು.
ಇಂದು ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪಲ್ಲವಿ. ಬಿ.ಆರ್. ಅವರು ಆರೋಪಿ ಹರೀಶ ಪೂಜಾರಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹರಿಶ್ಚಂದ್ರ ಉದ್ಯಾವರ್ ಅವರು ವಾದಿಸಿದ್ದರು.
ಇದನ್ನೂ ಓದಿ: ಅನ್ಯ ಪಕ್ಷಗಳ ನಾಯಕರ ಪಕ್ಷ ಸೇರ್ಪಡೆ ಬಗ್ಗೆ ಪರಿಶೀಲನೆಗೆ ಸಮಿತಿ ರಚನೆ: ಸಿಟಿ ರವಿ