ಮಂಗಳೂರು : ಮಗುವಿನ ಜೊತೆಗೆ ತಂದೆಯೂ ನೇತ್ರಾವತಿ ಸೇತುವೆಯ ಬಳಿಯಿಂದ ನಾಪತ್ತೆಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳ್ತಿಲ ನಿವಾಸಿಗಳಾದ ಗೋಪಾಲಕೃಷ್ಣ ರೈ(45) ಮತ್ತು ನಮೀಶ್ ರೈ(6) ನಾಪತ್ತೆಯಾದವರೆನ್ನಲಾಗಿದೆ.
ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈಯವರು ತಮ್ಮ ಹೆಂಡತಿ ಹಾಗೂ ಮಗನೊಂದಿಗೆ ಕೊಣಾಜೆಯ ಪಾವೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕಾಗಿ ಆಗಮಿಸಿದ್ದರು. ಆದರೆ, ನಿನ್ನೆ ರಾತ್ರಿ ಎರಡು ಗಂಟೆಯ ಸುಮಾರಿಗೆ ಗೋಪಾಲಕೃಷ್ಣ ರೈ ಪುತ್ರ ನಮೀಶ್ ರೈ ಜೊತೆ ಕಾರಿನಲ್ಲಿ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಆದರೆ, ಇಂದು ಬೆಳಗ್ಗಿನ ಜಾವ ಅವರ ಕಾರು ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದೆ.
ಮಹಾರಾಷ್ಟ್ರ ನೋಂದಣಿಯ ಈ ಕಾರಿನಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.