ಮಂಗಳೂರು : ಜಯಕರ್ನಾಟಕ ಜನಪರ ವೇದಿಕೆಯ ಮುಖಂಡ, ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ತನ್ನ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣ ಸಂಬಂಧ ಇಂದು ಮಂಗಳೂರು ಪೊಲೀಸ್ ಕಮಿಷನರ್ ಮುಂದೆ ತನಿಖೆಗೆ ಹಾಜರಾಗಿದ್ದಾರೆ. ಕೆಲ ದಿನಗಳ ಹಿಂದೆ ಗುಣರಂಜನ್ ಶೆಟ್ಟಿ ಅವರು ತನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಗೃಹ ಇಲಾಖೆಗೆ ದೂರು ನೀಡಿದ್ದರು. ಕೊಲೆಗೆ ಸಂಚು ರೂಪಿಸಿರುವ ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸರಿಗೆ ಗೃಹ ಇಲಾಖೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಗುಣರಂಜನ್ ಶೆಟ್ಟಿ ಮಂಗಳೂರು ಕಮಿಷನರ್ ಕಚೇರಿಯಲ್ಲಿ ತನಿಖೆಗೆ ಹಾಜರಾದರು.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗುಣರಂಜನ್ ಶೆಟ್ಟಿ, ನಮಗೆ ಸಿಕ್ಕ ಮಾಹಿತಿ ಪ್ರಕಾರ ನನ್ನ ಕೊಲೆಗೆ ಸ್ಕೆಚ್ ಹಾಕಿರುವ ಬಗ್ಗೆ ಗೃಹ ಇಲಾಖೆಗೆ ಮನವಿಯನ್ನು ಕೊಟ್ಟಿದ್ದೆ. ನನಗೆ ಹಲವು ಜನರ ಜೊತೆ ವ್ಯವಹಾರ ಇದೆ. ನಮ್ಮನ್ನು ಕಂಡರೆ ಆಗದವರೂ ಇದ್ದಾರೆ. ಹಾಗಾಗಿ ಪ್ರಕರಣ ಸಂಬಂಧ ಮಂಗಳೂರು ಕಮಿಷನರ್ ಕಚೇರಿಯಿಂದ ತನಿಖೆಗೆ ಕರೆದಿದ್ದರು. ನನಗೆ ಗೊತ್ತಿರುವ ಮಾಹಿತಿಗಳನ್ನು ಕೊಟ್ಟಿದ್ದೇನೆ .ಇದರ ಹಿಂದೆ ಇಂಥ ವ್ಯಕ್ತಿ ಇದ್ದಾರೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಪೊಲೀಸರ ಭದ್ರತೆ ಬಗ್ಗೆ ನಾನು ಕೇಳಿಲ್ಲ ಈ ಬಗ್ಗೆ ಪೊಲೀಸರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಕರ್ನಾಟಕ ಪೊಲೀಸರ ಬಗ್ಗೆ ನಂಬಿಕೆ ಇದೆ. ಯಾರು ಶಾಮೀಲಾಗಿದ್ದಾರೋ ಪೊಲೀಸರು ಅವರ ತನಿಖೆ ನಡೆಸುತ್ತಾರೆ. ಪ್ರಕರಣದ ಬಗ್ಗೆ ಮನ್ವಿತ್ ರೈ ಯಾಕಾಗಿ ಹೊರಗಡೆ ಹೇಳಿದ್ದಾರೋ ಗೊತ್ತಿಲ್ಲ .ಮನ್ವಿತ್ ರೈ ಜೊತೆಗೆ ನಾನು ಯಾವುದೇ ವೈಮನಸ್ಸು ಹೊಂದಿಲ್ಲ. ಅವರು ಯಾಕೆ ಆ ರೀತಿ ಹೇಳಿದ್ದಾರೆ ಎಂದು ಅವರೇ ಹೇಳಬೇಕು.
ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾತನಾಡಿ, ಗುಣರಂಜನ್ ಶೆಟ್ಟಿ ಪ್ರಕರಣದ ಬಗ್ಗೆ ಅವರನ್ನು ಕರೆಸಿ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅವರು ನಿರ್ದಿಷ್ಟ ವಿಚಾರ, ನಿರ್ದಿಷ್ಟ ವ್ಯಕ್ತಿಗಳಿಂದ ಬೆದರಿಕೆ ಇರುವ ಬಗ್ಗೆ ಅವರು ಮಾಹಿತಿ ನೀಡಿಲ್ಲ. ಅವರಿಗೆ ಸೆಕ್ಯುರಿಟಿ ಕೊಡುವಷ್ಟು ಬೆದರಿಕೆ ಇದೆ ಎಂದು ನಮಗೆ ಕಂಡುಬಂದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.