ಬಂಟ್ವಾಳ (ದಕ್ಷಿಣ ಕನ್ನಡ) : ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಪುಂಜಾಲಕಟ್ಟೆ ಎಸ್ಐ ಆಗಿದ್ದ ಸುತೇಶ್ ಅವರನ್ನು ಅಮಾನತುಗೊಳಿಸಲಾಗಿದೆ.
ಇತ್ತೀಚೆಗೆ ವಕೀಲ ಕುಲದೀಪ್ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ರಾಜ್ಯದ ಹಲವೆಡೆ ವಕೀಲರು ಪ್ರತಿಭಟನೆ ನಡೆಸಿದ್ದರು. ಜೊತೆಗೆ ವಕೀಲರ ಸಂಘವು ಸಿಎಂ, ಗೃಹ ಸಚಿವರಿಗೆ ಕ್ರಮಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಿತ್ತು. ಈ ಹಿನ್ನೆಲೆ ಸುತೇಶ್ ಅವರನ್ನು ಮಂಗಳೂರು ಎಸ್ಪಿ ಕಚೇರಿಗೆ ವರ್ಗಾಯಿಸಲಾಗಿತ್ತು. ಇದೀಗ ಸುತೇಶ್ ಅವರನ್ನು ಅಮಾನತುಗೊಳಿಸಿ ಐಜಿ ಕಚೇರಿ ಆದೇಶ ಹೊರಡಿಸಿದೆ.
ಪ್ರಕರಣ ಹಿನ್ನೆಲೆ : ಇಲ್ಲಿನ ವಸಂತ ಗೌಡ ಮತ್ತು ಭವಾನಿ ದಂಪತಿ ತಮ್ಮ ಜಮೀನನ್ನು ಬೇರೆಯವರು ಅತಿಕ್ರಮಣ ಮಾಡಬಾರದೆಂದು ಕಬ್ಬಿಣದ ಗೇಟು ಅಳವಡಿಸಿದ್ದರು. ಈ ಜಮೀನಿಗೆ ತಾಗಿಕೊಂಡಂತೆ ಇರುವ ಜಮೀನನ್ನು ಕುಲದೀಪ್ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಡಿ.2ರಂದು ಸಂಜೆ ವಸಂತ ಗೌಡರ ಜಮೀನಿನ ಗೇಟನ್ನು ಮುರಿದು ಕುಲದೀಪ್ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ವಿಚಾರವಾಗಿ ಪುಂಜಾಲಕಟ್ಟೆ ಪೊಲೀಸರಿಗೆ ವಸಂತಗೌಡ ದೂರು ದಾಖಲಿಸಿದ್ದರು. ಈ ಸಂಬಂಧ ಎಸ್ಐ ಸುತೇಶ್ ವಕೀಲ ಕುಲದೀಪ್ ಮನೆಗೆ ತೆರಳಿದ್ದರು. ಆಗ ವಿಚಾರಣೆಗೆಂದು ಕರೆದುಕೊಂಡು ಹೋಗುವ ಸಂದರ್ಭ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ : ವಕೀಲನ ಮೇಲೆ ಪೊಲೀಸರಿಂದ ಹಲ್ಲೆ: ಕ್ರಮಕ್ಕೆ ಪುತ್ತೂರು ವಕೀಲರ ಸಂಘ ಆಗ್ರಹ