ಮಂಗಳೂರು: ಜಿಲ್ಲೆಯಲ್ಲಿ 4 ತಾಲೂಕುಗಳು ನೂತನವಾಗಿ ರಚನೆಯಾಗಿದ್ದು, ಈ ತಾಲೂಕುಗಳಲ್ಲಿ ಅಧಿಕಾರಿಗಳು ತಮ್ಮ ಕಚೇರಿಗಳನ್ನು ಇನ್ನೂ ಆರಂಭಿಸಿಲ್ಲ. ಈ ಹಿನ್ನೆಲೆ ಎಲ್ಲಾ ಇಲಾಖೆಯವರು ಈ ತಿಂಗಳ ಒಳಗಡೆ ಆಯಾ ತಾಲೂಕಿನ ವ್ಯಾಪ್ತಿಯಲ್ಲಿ ತಮ್ಮ ಕಚೇರಿಗಳನ್ನು ತೆರೆದು ಅಲ್ಲಿಯೇ ಕಾರ್ಯನಿರ್ವಹಣೆ ಮಾಡಬೇಕು. ಯಾರಾದರೂ ಈ ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ಗಳನ್ನು ನಡೆಸಲಾಗಿದ್ದು, ಅಲ್ಲದೆ ಪ್ರತೀ ಹೋಬಳಿ ಮಟ್ಟದಲ್ಲಿ ತಿಂಗಳಿಗೊಮ್ಮೆ ವಿಶೇಷ ಅದಾಲತ್ಗಳನ್ನು ನಡೆಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಹಾಗೆಯೇ ಯಾರು ಪಿಂಚಣಿ ಪಡೆಯಲು ಅರ್ಹರಿದ್ದಾರೆ, ಅವರನ್ನು ಗ್ರಾಮ ಲೆಕ್ಕಿಗರೇ ಗುರುತಿಸಿ ಕರೆದುಕೊಂಡು ಬರಬೇಕು. ಮನೆ ಬಾಗಿಲಿಗೆ ತೆರಳಿ ಫಲಾನುವಿಗಳನ್ನು ಗುರುತಿಸಬೇಕು ಹೊರತು, ಬಂದವರಿಗೆ ಪಿಂಚಣಿ ಕೊಡುವ ಮನಸ್ಥಿತಿ ಬದಲಾಗಬೇಕು ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ 2018 ಏ. 1ರಿಂದ 2019 ಮೇ 31ರವರೆಗೆ 22,502 ಪಿಂಚಣಿದಾರರನ್ನು ಗುರುತಿಸಲಾಗಿದೆ. ಈ ಹಿನ್ನೆಲೆ ಗ್ರಾಮ ಲೆಕ್ಕಿಗರು ತಮ್ಮಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ ಮನೆ ಮನೆಗೆ ತೆರಳಿ ಉಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿಶೇಷ ಅದಾಲತ್ ಮುಖಾಂತರ ಅವರಿಗೆ ಆದೇಶ ನೀಡಿ ಪಿಂಚಣಿ ಬರುವಂತೆ ಮಾಡಬೇಕು. ಅಲ್ಲದೆ 2018 ಏ. 1ರಿಂದ 2019 ಮೇ 31ರವರೆಗೆ ಕಂದಾಯ ಅದಾಲತ್ನಲ್ಲಿ ಸುಮಾರು 2,044 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.