ಮಂಗಳೂರು: ತಂದೆ ಮೃತಪಟ್ಟರೆಂದು ಸುದ್ದಿ ತಿಳಿದು ನಾಪತ್ತೆಯಾಗಿದ್ದ ಮಗ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಆರ್ಯಾಪುವಿನಲ್ಲಿ ನಡೆದಿದೆ.
ಸೆಂಟ್ಯಾರು ಗುಂಡಿಗದ್ದೆ ದಿ.ನಾರಾಯಣ ಗೌಡರ ಪುತ್ರ ಸುರೇಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದವರು. ಸುರೇಶ್ ತನ್ನ ಚಿಕ್ಕಪ್ಪ ಚಿದಾನಂದ ಎಂಬುವರ ಸೆಂಟ್ಯಾರ್ನ ಮನೆಯಲ್ಲಿ ಉಳಿದುಕೊಂಡಿದ್ದರು. ಜು.14ರಂದು ತಂದೆ ನಾರಾಯಣ ಗೌಡರು ಮೃತಪಟ್ಟಿರುವ ಸುದ್ದಿಯನ್ನು ಫೋನ್ ಮೂಲಕ ತಿಳಿದ ಅವರು ಚಿಕ್ಕಪ್ಪನ ಮನೆಯಿಂದ ಬೆಳಗ್ಗೆ ಹೊರಟಿದ್ದರು.
ಆದರೆ, ಅವರು ತಂದೆಯ ಪಾರ್ಥೀವ ಶರೀರವನ್ನು ಕಾಣಲು ಬಾರದೇ ನಾಪತ್ತೆಯಾಗಿದ್ದರು. ಈ ಕುರಿತು ಮನೆಮಂದಿ ಸಂಬಂಧಿಕರ ಮನೆಗಳಲ್ಲಿ, ಸುತ್ತಮುತ್ತಲು ಹುಡುಕಾಡಿದ್ದರು. ಆದರೆ, ಸುರೇಶ್ ಅವರು ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಘಟನೆಗೆ ಸಂಬಂಧಿಸಿ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಹಂತದಲ್ಲೇ ಸುರೇಶ್ರ ಮೃತದೇಹ ಆರ್ಯಾಪು ಗ್ರಾಮದ ಸೆಂಟ್ಯಾರು ಬಳಿಯ ಗುಡ್ಡೆಯೊಂದರಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.