ಮಂಗಳೂರು: ಈ ವಿದ್ಯಾರ್ಥಿನಿಗೆ ಸೊಂಟದ ಕೆಳಗೆ ಬಲವಿಲ್ಲ. ಮನೆಯಲ್ಲಿ ತೀರಾ ಬಡತನವಿದೆ. ಹೀಗಿದ್ದರೂ ಕಲಿಯುವ ಉತ್ಸಾಹ ಅಪರಿಮಿತ. ಈಕೆ ಕೋಣಾಜೆಯ ನಿವಾಸಿ ಫಾತಿಮತ್ ನಿಶಾ. ಕೊಣಾಜೆ ಪದವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಹುಟ್ಟಿನಿಂದಲೇ ಕೈ, ಕಾಲುಗಳ ಬಲಹೀನತೆ ಈಕೆಯನ್ನು ಕಾಡುತ್ತಿದೆ. ಸೊಂಟದ ಕೆಳಗೆ ಶಕ್ತಿಯೇ ಇಲ್ಲದಿರುವ ಈಕೆಗೆ ಕಲಿತು ಸಾಧಿಸುವ ಮಹದಾಸೆ ಇದೆ. ಅದಕ್ಕಾಗಿ ಮನೆಯಲ್ಲಿ ಬಡತನವಿದ್ದರೂ ವಿದ್ಯೆಯತ್ತ ಗಮನಹರಿಸಿದ್ದಾಳೆ.
ಮನೆಯಲ್ಲಿ ಕಡುಬಡತನವಿದ್ದು ಈಕೆಯನ್ನು ಹೈಸ್ಕೂಲ್‌ಗೆ ಕಳುಹಿಸುವುದೇ ಪೋಷಕರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಹೈಸ್ಕೂಲ್‌ಗೆ ರಿಕ್ಷಾದಲ್ಲಿಯೇ ಕಳುಹಿಸಬೇಕು. ರಿಕ್ಷಾದಲ್ಲಿ ಕಳುಹಿಸಿದರೂ ಶಾಲೆಯಲ್ಲಿ ಆಕೆಯ ಕಾಳಜಿ ಯಾರು ಮಾಡುತ್ತಾರೆ ಎಂಬ ಚಿಂತೆ. ಇದೆಲ್ಲದರ ನಡುವೆ ಹೈಸ್ಕೂಲ್ನಲ್ಲಿ ಮೂವರು ಗೆಳತಿಯರು ಇವಳನ್ನು ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ.
ತಾಯಿಯಂತಿರುವ ಗೆಳತಿಯರು: ರಿಕ್ಷಾದಲ್ಲಿ ಹೈಸ್ಕೂಲ್‌ಗೆ ಬರುವ ಫಾತಿಮತ್ ನಿಶಾಗಾಗಿ ಮೂವರು ಗೆಳತಿಯರು ಕಾದಿರುತ್ತಾರೆ. ಸೌಜನ್ಯಾ, ನಫೀಸಾ ಸಮ್ರೀನಾ, ಫಾತಿಮತ್ ಸಫಿರಾ ಎಂಬ ಮೂವರು ಗೆಳತಿಯರು ಫಾತಿಮತ್ ನಿಶಾ ಬರುವ ಮುಂಚೆಯೇ ಹೈಸ್ಕೂಲ್‌ಗೆ ಬಂದು ಈಕೆಗಾಗಿ ಕಾಯುತ್ತಾರೆ. ರಿಕ್ಷಾ ಬಂದೊಡನೆ ವ್ಹೀಲ್ಚೇರ್ನೊಂದಿಗೆ ಎದುರುಗೊಳ್ಳುತ್ತಾರೆ. ರಿಕ್ಷಾದಲ್ಲಿರುವ ಫಾತಿಮತ್ ನಿಶಾಳನ್ನು ಮೂವರು ತಮ್ಮ ತೋಳಿನಲ್ಲಿ ಎತ್ತಿ ವ್ಹೀಲ್ಚೇರ್ನಲ್ಲಿ ಕೂರಿಸಿ ತರಗತಿ ಕೋಣೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಆಕೆಯನ್ನು ವ್ಹೀಲ್ಚೇರ್ನಿಂದ ಇಳಿಸಿ ತರಗತಿಯ ಚೇರ್ನಲ್ಲಿ ಕೂರಿಸುತ್ತಾರೆ. ಆ ಬಳಿಕ ವಾಷ್ ರೂಂಗೆ ತೆರಳುವ ವೇಳೆಯಲ್ಲಿಯೂ, ಮತ್ತೆ ರಿಕ್ಷಾ ಬಂದು ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವವರೆಗೂ ತಾಯಿಯಂತೆ ಅವರದ್ದೇ ಸೇವೆ.
ವೈದ್ಯೆಯಾಗುವ ಕನಸು: ಫಾತಿಮತ್ ನಿಶಾಗೆ ವ್ಹೀಲ್ಚೇರ್ ಹಾಗೂ ಮತ್ತೊಬ್ಬರ ಆಸರೆಯಿಲ್ಲದೇ ಏನೂ ಮಾಡಲು ಸಾಧ್ಯವಾಗದು. ಈಕೆಯ ಶಿಕ್ಷಣ ಪ್ರೀತಿ ಅಗಾಧವಾಗಿದ್ದು, ಎಂತಹ ಕಷ್ಟವೇ ಎದುರಾದರೂ ಶಾಲೆಗೆ ಬರುವುದನ್ನು ತಪ್ಪಿಸುವುದಿಲ್ಲ. ಕಲಿಕೆಯಲ್ಲೂ ಸದಾ ಮುಂದಿದ್ದಾಳೆ. ತಂದೆಯನ್ನು ಕಳೆದುಕೊಂಡಿರುವ ಫಾತಿಮತ್ ನಿಶಾಗೆ ತಾಯಿಯೇ ಆಸರೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರ ಕುಟುಂಬದಲ್ಲಿ ತಾಯಿ, ಅಜ್ಜಿ, ಸೋದರ, ಸೋದರಿಯರಿದ್ದಾರೆ. ಇವರ ತಾಯಿ ಬೀಡಿ ಕಟ್ಟಿ ಗಳಿಸುವ ಅಲ್ಪ ಆದಾಯವೇ ಜೀವನ ನಿರ್ವಹಣೆಗೆ ಆಧಾರ.
ಫಾತಿಮತ್ ನಿಶಾ ಮಾತನಾಡಿ, "ನನ್ನನ್ನು 1ರಿಂದ ಮೂರನೇ ತರಗತಿವರೆಗೆ ಅಮ್ಮ ಎತ್ತಿಕೊಂಡು ಶಾಲೆಗೆ ಹೋಗುತ್ತಿದ್ದರು. ನಾಲ್ಕನೇ ತರಗತಿಯಿಂದ ಅವರಿಗೆ ಎತ್ತಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಆಗ ರಿಕ್ಷಾದಲ್ಲಿ ಹೋಗಲು ಪ್ರಾರಂಭಿಸಿದೆ. ರಿಕ್ಷಾದಲ್ಲಿ ಹೋಗಲು ಹಣದ ಸಮಸ್ಯೆ ಎದುರಾಯಿತು. ಐದನೇ ತರಗತಿಗೆ ಕಳುಹಿಸಲು ಕಷ್ಟವಾಗಿ ಅಮ್ಮ ಶಾಲೆಗೆ ಹೋಗುವುದು ಬೇಡ ಎಂದರು. ಆದರೆ ಶಾಲೆಯಲ್ಲಿ ಟೀಚರ್ ಒತ್ತಾಯ ಪಡಿಸಿದ್ದರಿಂದ 7ನೇ ತರಗತಿವರೆಗೆ ಕಳುಹಿಸಿದರು. ಎಂಟನೇ ತರಗತಿಗೆ ಹೋಗಲು ಮತ್ತೆ ಶಿಕ್ಷಕಿಯೊಬ್ಬರು ಒತ್ತಾಯಪಡಿಸಿದ್ದರಿಂದ ನನ್ನನ್ನು ಹೈಸ್ಕೂಲ್ಗೂ ಸೇರಿಸಿದರು. 8ನೇ ತರಗತಿಯಿಂದ ಶಾಲೆಗೆ ಬರಲು ವೀಣಾ ಮೇಡಂ ಹಣದ ಸಹಾಯ ಮಾಡಿದರು. ಅವರು ವರ್ಗಾವಣೆ ಆದ ಮೇಲೆ ನಾಸಿರ್ ಸರ್ ಅವರು ರಿಕ್ಷಾಕ್ಕೆ ಹಣದ ಸಹಾಯ ಮಾಡಿದ್ದಾರೆ. ಹೈಸ್ಕೂಲ್ನಲ್ಲಿ ಮೂವರು ಗೆಳತಿಯರು ತುಂಬಾ ಸಹಾಯ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಇಂತಹ ಗೆಳೆಯರು ಸಿಗಲಿಕ್ಕಿಲ್ಲ. ಅಷ್ಟು ಒಳ್ಳೆಯ ಫ್ರೆಂಡ್ಸ್ ಸಿಕ್ಕಿದ್ದಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ" ಎನ್ನುತ್ತಾರೆ.
ಗೆಳತಿ ಸೌಜನ್ಯ ಮಾತನಾಡಿ, "ಫಾತಿಮತ್ ನಿಶಾ ಶಾಲೆಗೆ ಬಂದೊಡನೆ ನಾವು ಮೂವರು ಅವಳನ್ನು ರಿಕ್ಷಾದಿಂದ ಎತ್ತಿ ಕೂರಿಸಿ ಪ್ರಾರ್ಥನೆಗೆ, ವಾಷ್ ರೂಂ ಅವಳು ಹೋಗಬೇಕಾದ ಕಡೆಗೆ ಕರೆದುಕೊಂಡು ಹೋಗುತ್ತೇವೆ. ಅವಳು ಸಂಜೆ ಹೋಗುವ ತನಕ ಜೊತೆಗೆ ಇರುತ್ತೇವೆ. ಅವಳನ್ನು ರಿಕ್ಷಾದಲ್ಲಿ ಕೂರಿಸಿದ ಬಳಿಕ ನಾವು ಹೋಗುವುದು" ಎಂದರು.
ಹೈಸ್ಕೂಲ್ ಮುಖ್ಯಶಿಕ್ಷಕ ರಾಜೀವ್ ನಾಯ್ಕ್ ಮಾತನಾಡಿ, "ಫಾತಿಮತ್ ನಿಶಾ ಕಲಿಕೆಯಲ್ಲಿ ತುಂಬಾ ಚುರುಕಿನ ವಿದ್ಯಾರ್ಥಿನಿ. ಮನೆಯಲ್ಲಿ ಸಮಸ್ಯೆ, ವಿರೋಧ ಇದ್ದರೂ ತಾನು ಮಾನಸಿಕವಾಗಿ ಗಟ್ಟಿಯಾಗಿದ್ದೇನೆ ಎಂದು ಶಾಲೆಗೆ ಬರುತ್ತಿದ್ದಾಳೆ. ಸಾವಿರ ಸಮಸ್ಯೆಗಳಿದ್ದರೂ ಅವಳ ಗೆಲ್ಲುತ್ತೇನೆ ಎಂಬ ಧೈರ್ಯ ಮೆಚ್ಚಬೇಕು. ಬರೆಯುವುದು ನಿಧಾನವಾಗಿದ್ದರೂ ಆಕೆ ಔಟ್ ಅಫ್ ಔಟ್ ಅಂಕ ಪಡೆಯುತ್ತಾಳೆ. ತರಗತಿಗೂ ಫಸ್ಟ್ ಬರುತ್ತಿದ್ದಾಳೆ. ಸೌಜನ್ಯ, ಸಫೀರಾ, ಸಮ್ರಿನಾ ಎಂಬ ಮೂವರು ಹುಡುಗಿಯರು ತಾಯಿಯಂತೆ ಅವಳ ಸೇವೆ ಮಾಡುತ್ತಿದ್ದಾರೆ. ಮನೆಯಲ್ಲಿ ಅಮ್ಮ ಮಾಡುವಂತ ಸೇವೆಯನ್ನು ಅವರು ಇಲ್ಲಿ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ಈಕೆಗೆ ಸಹಾಯ ಮಾಡಬಯಸುವವರು (ಫಾತಿಮತ್ ನಿಶಾ, ಬ್ಯಾಂಕ್ ಆಫ್ ಬರೋಡ, ಕೋಣಾಜೆ ಬ್ರ್ಯಾಂಚ್, ಖಾತೆ ನಂಬರ್ - 84700100012451, IFSC CODE- BARB0VJKNJE) ವಿಚಾರಿಸಿ ಧನಸಹಾಯ ಮಾಡಬಹುದು.
ಇದನ್ನೂ ಓದಿ: ಕಣ್ಣಿಲ್ಲದಿದ್ದರೇನಂತೆ ಕಲಿಸುವ ಛಲವಿದೆ : ಮಂಗಳೂರು ವಿವಿಯಲ್ಲೊಬ್ಬರು ವಿಶೇಷಚೇತನ ಉಪನ್ಯಾಸಕ!