ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ನಗರದಲ್ಲಿ ಉಂಟಾದ ಗಲಭೆಯು ಕಾಶ್ಮೀರದ ಘಟನೆಗಳು ಮಂಗಳೂರಿನಲ್ಲಿ ನಡೆದಂತಿದೆ. ಇದು ಬಹಳ ಆತಂಕಾರಿಯಾಗಿದ್ದು, ಇದರ ಹಿಂದೆ ಭಯೋತ್ಪಾದಕ ಸಂಘಟನೆ ವ್ಯಕ್ತಿಗಳ ನೇರ ಕೈವಾಡವಿದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.
ನಗರದ ಸಂಘ ನಿಕೇತನದಲ್ಲಿ ಮಾತನಾಡಿ, ಈ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ. ಅಲ್ಲದೆ ಈ ಪ್ರಕರಣವನ್ನು ಎನ್ಐಎ ಮೂಲಕ ತನಿಖೆ ನಡೆಸಬೇಕು. ಈ ದುಷ್ಕೃತ್ಯದ ಹಿಂದೆ ಯಾರಿದ್ದಾರೆಂದು ಪತ್ತೆ ಹಚ್ಚಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಟೆಂಪೊಗಳಲ್ಲಿ ಕಲ್ಲು ತುಂಬಿಸಿ ತರುವುದು, ಕಲ್ಲು ತೂರಾಟ ನಡೆಸುವುದು, ಮುಖಕ್ಕೆ ಬಟ್ಟೆ ಕಟ್ಟಿ ಯಾವ ರೀತಿ ದಾಂಧಲೆ ಎಲ್ಲಾ ತಿಳಿದಿದೆ. ಅಲ್ಲದೆ ಕೇರಳ ರಾಜ್ಯದಿಂದ ಜನರು ಬಂದಿರುವುದರ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯ ಬಳಿಕ ಎಲ್ಲಾ ರಾಜಕೀಯ ಪಕ್ಷಗಳು ಮಂಗಳೂರಿಗೆ ಬಂದಿದ್ದು, ಮೃತಪಟ್ಟ ಮುಸ್ಲಿಂ ಸಮುದಾಯದವರನ್ನು ನೋಡಲು ಹೋಗಿದ್ದಾರೆ. ಆದರೆ ಇದೇ ಕಲ್ಲು ತೂರಾಟದಲ್ಲಿ ಸಾಕಷ್ಟು ಮಂದಿ ಪೊಲೀಸರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದರೆ ಅವರ ಬಗ್ಗೆ ಯಾವ ರಾಜಕಾರಣಿಗಳು ಚಕಾರ ಎತ್ತಿಲ್ಲ. ಒಂದು ಸಮುದಾಯಕ್ಕೆ ನೋವಾದಾಗ ಕಣ್ಣೀರು ಇಡುವವರು, ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಗಾಯಗೊಂಡರು ಯಾರೂ ಮಾತನಾಡುತ್ತಿಲ್ಲ. ಹಾಗಾಗಿ ಇವರ ಮೊಸಳೆ ಕಣ್ಣೀರನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರು ಕಲ್ಲು ತೂರಾಟ ನಡೆಸಿದ್ದಾರೆ, ಅವರೇ ಇಂದು ಪೊಲೀಸ್ ಠಾಣೆಗೆ ಕರೆ ಮಾಡಿ ಬೆದರಿಕೆ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದು ಇದರಿಂದ ತಿಳಿಯುತ್ತದೆ. ಇದೆಲ್ಲವನ್ನೂ ಕೂಲಂಕಷವಾಗಿ ತನಿಖೆ ಮಾಡಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.