ಪುತ್ತೂರು (ದಕ್ಷಿಣ ಕನ್ನಡ) : ಹಿಂದೂ ದೇವರನ್ನು ಅವಹೇಳನ ಮಾಡಿದ್ದೇನೆ ಎಂಬ ಆರೋಪ ನನ್ನ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿ 48 ಗಂಟೆಯೊಳಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಾನು ಪುತ್ತೂರು ನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸುತ್ತೇನೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರ್‌ನಾಥ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಕ್ಲಬ್ ಹೌಸ್ ಚರ್ಚೆಯನ್ನು ತಿರುಚಿ ಪ್ರಸಾರ ಮಾಡಿದ ಯುಟ್ಯೂಬ್ ಚಾನಲ್ ನ ಮುಮ್ತಾಜ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ. ತನ್ನ ಮನೆಯ ಮೇಲೆ ದಾಳಿ ಮಾಡಿದ ತಂಡದ ವಿರುದ್ಧವೂ ದೂರು ನೀಡಿದ್ದೇನೆ. ಆದರೆ ಪೊಲೀಸರಿಂದ ಯಾವುದೇ ಪ್ರಕರಣದಲ್ಲಿಯೂ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿಲ್ಲ. ತಿರುಚಿದ ವಿಡಿಯೋ ಪ್ರಸಾರ ಮಾಡಿದ ಮುಮ್ತಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. `ಕ್ಲಬ್ ಹೌಸ್ ಅಸಲಿ ಆಡಿಯೋವನ್ನು ಪರಿಶೀಲನೆ ನಡೆಸಿ ನನಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಈ ನಡುವೆ ಬಿಜೆಪಿ ಪಕ್ಷದ ಅಧಿಕೃತ ಪೇಜ್ ನಲ್ಲಿಯಲ್ಲಿಯೂ ತಿರುಚಲಾದ ಈ ವಿಡಿಯೋ ಹಾಕಲಾಗಿದೆ. ಹಿಂದೂ ಪರ ಎಂದು ಹೇಳುವ ಬಿಜೆಪಿ ಆಡಳಿತದಲ್ಲಿ ಯಾವ ಮಹಿಳೆಗೂ ರಕ್ಷಣೆ ಇಲ್ಲ ಎಂಬುವುದನ್ನು ಈ ಮೂಲಕ ಸಾಬೀತು ಮಾಡಿದೆ. ಹಿಂದೂ ಪರ ಸಂಘಟನೆಗಳನ್ನು ಹಿಂದೂ ಮಹಿಳೆಯ ಮೇಲೆ ಎತ್ತಿಕಟ್ಟುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ನಾನು ದೇವರ ಭಕ್ತೆಯಾಗಿದ್ದು, ಯಾವುದೇ ಕಾರಣಕ್ಕೂ ದೇವರಿಗೆ ಅವಹೇಳನ ಮಾಡುವ ಹೆಣ್ಣು ಮಗಳಲ್ಲ. ನಾನು ಹಿಂದು ಎನ್ನುವುದಕ್ಕೆ ಯುಟ್ಯೂಬ್ ಚಾನಲ್, ಹಿಂದೂ ಪರ ಸಂಘಟನೆಗಳ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಹೇಳಿದರು.
ಶಾಸಕರೇ ಕ್ಷಮೆಯಾಚಿಸಬೇಕು : ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂಬ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕರ ಕ್ಷೇತ್ರದ ವ್ಯಾಪ್ತಿಯ ಮಹಿಳೆಯೊಬ್ಬಳಿಗೆ ಸೂಕ್ತ ಭದ್ರತೆ ಒದಗಿಸದ, ಮನೆಯ ಮೇಲೆ ತಂಡವೊಂದು ದಾಳಿ ನಡೆಸಿದಾಗ ರಕ್ಷಣೆ ಒದಗಿಸುವ ಜವಾಬ್ದಾರಿ ಹೊರದ ಶಾಸಕರೇ ಕ್ಷಮೆಯಾಚನೆ ಮಾಡಬೇಕು. ನಾನು ಯಾವುದೇ ದೇವರಿಗೆ ಅವಹೇಳನ ಮಾಡಿಲ್ಲ. ನನಗೆ ದೇವರ ಬೆಂಬಲ ಇದೆ. ಶ್ರೀರಾಮಚಂದ್ರನೇ ನನ್ನನ್ನು ರಕ್ಷಿಸುತ್ತಾನೆ ಎಂದು ಶೈಲಜಾ ಅಮರ್ ನಾಥ್ ಹೇಳಿದ್ದಾರೆ.
ಓದಿ : ಪ್ರಧಾನಿ ಮೋದಿಗಾಗಿ ಸಿದ್ಧವಾಯ್ತು ಕೆಂಪು ಬಣ್ಣದ ರೇಷ್ಮೆ ನೂಲಿನ ಮೈಸೂರು ಪೇಟ