ಬಂಟ್ವಾಳ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿಢೀರನೆ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತಂದ ಕೆಲ ಕಾಯ್ದೆಗಳ ಸಂಬಂಧ ಬಿ ಸಿ ರೋಡ್ ರಂಗೋಲಿ ಸಭಾಭವನದಲ್ಲಿ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.
ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿಂತಕ ಶಿವಸುಂದರ್, ರೈತ ದಲಿತ ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟ ವತಿಯಿಂದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನು ಅಗತ್ಯ ಸರಕುಗಳ ಕಾಯ್ದೆಗಳ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಹಾಗೂ ಮೇಲ್ಜಾತಿಯವರಿಗೆ ಶೇ.10ರ ಮೀಸಲಾತಿಗಳಿಂದ ಇಡೀ ದೇಶಕ್ಕೇ ಆಪತ್ತಿದೆ ಎಂದು ಹೇಳಿದರು.
ಜಿಗಣೆಗಳು ರಕ್ತ ಹೀರುವ ವೇಳೆ ಮನುಷ್ಯರಿಗೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ಆಳುವ ಸರ್ಕಾರಗಳ ನೀತಿ ಬಡ ಜನರಿಗೆ ಮಾರಕವಾಗಿವೆ ಎಂದ ಅವರು, ನಮ್ಮ ತೆರಿಗೆ ಹಣವನ್ನು ಶ್ರೀಮಂತರ ಜೇಬಿಗೆ ಭರ್ತಿ ಮಾಡಲಾಗುತ್ತಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀತಿಗಳನ್ನು ಕಟುವಾಗಿ ಟೀಕಿಸಿದ ಅವರು, ಸರ್ಕಾರಗಳು ಜನರ ಹಿತ ಕಾಯುತ್ತಿಲ್ಲ ಎಂದರು.
ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ವಿಷಯ ಮಂಡಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಮಾರುತಿ ಮಾನ್ಪಡೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿಯ ಸಾಧಕ ಬಾಧಕಗಳನ್ನು ವಿವರಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್ ವಹಿಸಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ಯಾದವ್ ಶೆಟ್ಟಿ, ರಾಮ ಚನ್ನಪಟ್ಟಣ, ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು.