ಮಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ಪಿಎಫ್ಐ ಹಾಗೂ ಎಸ್ಡಿಪಿಐ ಪಕ್ಷವನ್ನು ಬ್ಯಾನ್ ಮಾಡಬೇಕೆಂದು ಹೇಳಲು ಯಾವ ನೈತಿಕತೆಯಿದೆ. 1984ರಲ್ಲಿ ಕಾಂಗ್ರೆಸ್ ಸಾವಿರಾರು ಸಿಖ್ಖರ ಕಗ್ಗೊಲೆ ಮಾಡಿತು. ಆದ್ದರಿಂದ, ಕಾಂಗ್ರೆಸ್ ಪಕ್ಷವನ್ನೂ ಬ್ಯಾನ್ ಮಾಡಬಹುದಲ್ವೇ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಬಿಜೆಪಿ, ಸಂಘ ಪರಿವಾರದವದರಿಗೆ ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡಬೇಕೆಂದು ಹೇಳಿಕೆ ಕೊಡುವುದೇ ಕೆಲಸ. ಆದರೆ, ಈ ರೀತಿ ಹೇಳಿಕೆ ಕೊಡುವ ಸಿದ್ದರಾಮಯ್ಯ ಅವರು ಯಾಕೆ ಬ್ಯಾನ್ ಮಾಡಬೇಕೆಂದು ಸ್ಪಷ್ಟನೆ ಕೊಡಲಿ ಎಂದು ಹೇಳಿದರು. ಪಿಎಫ್ಐ, ಎಸ್ಡಿಪಿಐ ಯಾವುದೇ ಜಾತಿ, ಧರ್ಮದ ವಿರುದ್ಧ ಮಾತನಾಡಿದೆಯೇ? ಎಂದು ಪ್ರಶ್ನಿಸಿದರು.
ಯಾವುದಾದರೂ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆಯೇ. ಆರ್ಎಸ್ಎಸ್, ಬಜರಂಗದಳದವರು ಪ್ರತಿನಿತ್ಯ ಮುಸ್ಲಿಮರು, ಕ್ರಿಶ್ಚಿಯನ್ನರ ವಿರುದ್ಧ ದ್ವೇಷದ ಭಾಷಣ ಮಾಡುತ್ತಿರುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿರುವಾಗ ಗುಜರಾತ್ ಗಲಭೆ ನಡೆದಿತ್ತು. ಈ ಗಲಭೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಏಕೆ ಬ್ಯಾನ್ ಮಾಡಿಲ್ಲ ಎಂದು ಕೇಳಿದರು.
ಹಿಂದೂಗಳ ಜ್ಯುವೆಲ್ಲರಿ ಶಾಪ್ನಲ್ಲಿಯೇ ಚಿನ್ನ ಖರೀದಿಸಬೇಕೆಂಬ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಬ್ದುಲ್ ಮಜೀದ್ ಅವರು, ಕೋಮುವಾದಿ ಕ್ರಿಮಿ ಪ್ರಮೋದ್ ಮುತಾಲಿಕ್ ಅವರನ್ನು ಯಾಕೆ ಹೈಲೈಟ್ ಮಾಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಆತ ಜನ ವಿರೋಧಿ, ದೇಶ ವಿರೋಧಿ, ಮನುಷ್ಯ ವಿರೋಧಿ ನೀತಿಯುಳ್ಳವನು. ತಕ್ಷಣ ಆತನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು.
ಪ್ರಮೋದ್ ಮುತಾಲಿಕ್ ಹೇಳಿಕೆಗಳಿಗೆ ಮಾಧ್ಯಮಗಳು ಅತೀ ಹೆಚ್ಚಿನ ಪ್ರಚಾರ ಕೊಡುತ್ತಿದೆ. ಇಂತಹ ಪ್ರಚಾರ ಈತನಿಗೆ ಅಗತ್ಯವಿಲ್ಲ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.
ಓದಿ: ಪ್ರಿಯಾಂಕ್ ಖರ್ಗೆಗೆ ನೋಟಿಸ್ ; ಸರ್ಕಾರಕ್ಕೆ ಡಿ. ಕೆ ಶಿವಕುಮಾರ್ ತರಾಟೆ