ಮಂಗಳೂರು: ಎಸ್ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ನಿಂದ ಪುತ್ತೂರು ವಿಧಾನಸಭೆ ಕ್ಷೇತ್ರಕ್ಕೆ ಶಾಫಿ ಬೆಳ್ಳಾರೆಯನ್ನು ಕಣಕ್ಕಿಳಿಸುವುದಾಗಿ ಎಸ್ಡಿಪಿಐ ಘೋಷಣೆ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಫೆಬ್ರುವರಿ 10ರಂದು ಪುತ್ತೂರಿನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜಿದ್ ಕೊಡ್ಲಿಪೇಟೆ ಅವರು ಶಾಫಿ ಬೆಳ್ಳಾರೆಯನ್ನು ಪುತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿಸುವುದಾಗಿ ಘೋಷಣೆ ಮಾಡಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಶಾಫಿ ಬೆಳ್ಳಾರೆಗೆ ಟಿಕೆಟ್ ನೀಡುವುದಾಗಿ ಘೋಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಈಗಾಗಲೇ ಶಾಫಿ ಬೆಳ್ಳಾರೆಯನ್ನು ಬಿಜೆಪಿ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ಬಂಧನದಲ್ಲಿರುವ ಆರೋಪಿಯನ್ನು ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ. ಎಸ್ಡಿಪಿಐ ಜೈಲಿನಿಂದಲೇ ಶಾಫಿ ಬೆಳ್ಳಾರೆಯನ್ನು ಚುನಾವಣಾ ಕಣಕ್ಕಿಳಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಸಚಿವ ಆರ್ ಅಶೋಕ್ ಕಿಡಿ : ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಯು ಎಸ್ ಡಿಪಿಐನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ. ದೇಶದಲ್ಲಿ ಈಗಾಗಲೇ ಪಿಎಫ್‌ಐ ಸಂಘಟನೆ ಬ್ಯಾನ್ ಆಗಿದೆ. ಎಸ್ಡಿಪಿಐ ಅನ್ನು ಕೂಡ ನಿಷೇಧ ಮಾಡಬೇಕು. ಎಸ್ಡಿಪಿಐನವರು ಭಯೋತ್ಪಾದಕರನ್ನು ಕರೆದುಕೊಂಡು ಬಂದು ಟಿಕೆಟ್ ಕೊಡುತ್ತಾರೆ. ಆಗ ಅವರಿಗೂ ಭದ್ರತೆ ನೀಡಬೇಕಾಗುತ್ತದೆ. ನಂತರ ಅವರನ್ನು ಬಿಡುಗಡೆ ಮಾಡಿ ಎಂದು ಕೋರ್ಟ್ಗೆ ಹೋಗುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಎಸ್ಡಿಪಿಐಯು ದೇಶ ವಿರೋಧಿ ಚಟುವಟಿಕೆಯ ಅಂಗವಾಗಿದ್ದು, ಅದೂ ಕೂಡ ಬ್ಯಾನ್ ಆಗಬೇಕು ಎಂದು ಒತ್ತಾಯಿಸಿದರು.
ಪ್ರಮೋದ್ ಮುತಾಲಿಕ್ ವಿರೋಧ: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಶಾಫಿ ಬೆಳ್ಳಾರೆಗೆ ಎಸ್ಡಿಪಿಐ ಟಿಕೆಟ್ ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದರೆ ಶ್ರೀರಾಮ ಸೇನೆಯು ಉಗ್ರ ಹೋರಾಟ ನಡೆಸಲಿದೆ ಎಂದು ಮುತಾಲಿಕ್ ಹೇಳಿದ್ದಾರೆ.
ಈ ಹಿಂದೆಯೂ ಕಣಕ್ಕಿಳಿದಿದ್ದ ಶಾಫಿ ಬೆಳ್ಳಾರೆ: ಶಾಫಿ ಬೆಳ್ಳಾರೆ ಎಸ್ಡಿಪಿಐನ ರಾಜ್ಯ ಕಾರ್ಯದರ್ಶಿಯಾಗಿದ್ದು, ಕಳೆದ ಮೂರು ತಿಂಗಳುಗಳಿಂದ ಜೈಲಿನಲ್ಲಿದ್ದಾರೆ. 2021ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ದ್ವಿ ಸದಸ್ಯ ಕ್ಷೇತ್ರಕ್ಕೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಚಲಾವಣೆಯಾದ 6,011 ಮತಗಳಲ್ಲಿ 204 ಮತಗಳನ್ನು ಪಡೆದಿದ್ದರು.
ಇದನ್ನೂ ಓದಿ: ಹತ್ಯೆಯಾಗಿದ್ದ ಎಲ್ಟಿಟಿಇ ಪ್ರಭಾಕರನ್ ಇನ್ನೂ ಜೀವಂತ ಕಾಂಗ್ರೆಸ್ನ ಮಾಜಿ ನಾಯಕ ಅಚ್ಚರಿ ಹೇಳಿಕೆ