ಮಂಗಳೂರು: ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳಿಗೆ ಎಷ್ಟು ಪ್ರಾಮುಖ್ಯತೆಯಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳ ಮೇಲೂ ಕೆಲವು ಶಿಕ್ಷಣ ಸಂಸ್ಥೆಗಳು ಕೊಡುತ್ತವೆ. ಇದೀಗ ನಗರದ ವಿದ್ಯಾಸಂಸ್ಥೆಯೊಂದು ಸಾಮಾಜಿಕ ಅಂತರ ಕಾಯ್ದುಕೊಂಡು ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ಮುಂದಾಗಿದೆ.
ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳು ಜಡತ್ವ ತೊಡೆದು ಹಾಕಿ ಚುರುಕಿನಿಂದ ಇರಲು ಸಾಧ್ಯ. ಅದೇ ರೀತಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಸಾಧ್ಯ. ಆದರೆ ಕೊರೊನಾ ಬಂದ ಬಳಿಕ ಶಾಲೆಗಳಲ್ಲಿ ಇನ್ನು ಮುಂದೆ ಪಠ್ಯೇತರ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮಂಗಳೂರಿನ ಶಾರದಾ ವಿದ್ಯಾಲಯ ಪಠ್ಯದೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ಚಿಂತಿಸುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಜೀವನ ಸಾಗಿಸಬೇಕಾದ ಅನಿವಾರ್ಯತೆ ಈಗ ಎಲ್ಲರಿಗೂ ಇದೆ. ಶಾಲೆಗಳೂ ಕೂಡಾ ಅದೇ ಮಾದರಿ ಅನುಸರಿಸೋ ಬಗ್ಗೆ ಚಿಂತಿಸುತ್ತಿವೆ. ಅದರಲ್ಲೂ ಪಠ್ಯೇತರ ಚಟುಟಿಕೆಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಸೋಕೆ ಸಾಧ್ಯಾನೇ ಇಲ್ಲ. ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಸಂಸ್ಥೆ ಸಾಮಾಜಿಕ ಅಂತರ ಕಾಪಾಡಿಕೊಂಡೇ ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದೆ.
ಈ ಕುರಿತು ಮಾತನಾಡಿರುವ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಿ. ಪುರಾಣಿಕ್ ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ನಡೆಸಿದರೆ ವಿದ್ಯಾರ್ಥಿಗಳು ಚುರುಕಿನಿಂದ ಇರುತ್ತಾರೆ. ಕೊರೊನಾ ಲಾಕ್ ಡೌನ್ ಬಳಿಕ ಮನೆಯಲ್ಲಿರುವ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ಆರಂಭವಾಗಿದೆ. ಜೊತೆಗೆ ವಿಡಿಯೋ ಮೂಲಕ ಮಕ್ಕಳಿಗೆ ಮನೆಯಲ್ಲಿ ಇದ್ದು ದೈಹಿಕ ಸಾಮರ್ಥ್ಯ, ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ವಿದ್ಯಾಲಯದಿಂದ ಸೂಚಿಸಲಾಗುತ್ತಿದೆ. ಮನೆಯಲ್ಲೇ ಕುಳಿತು ವ್ಯಾಯಾಮ, ಕ್ರಾಫ್ಟ್ ನಡೆಸುವುದನ್ನು ಕಲಿಸಿಕೊಡಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದ್ದಾರೆ.