ಬೆಳ್ತಂಗಡಿ(ದಕ್ಷಿಣ ಕನ್ನಡ): ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ ಎಂಬ ವಿಚಾರವಾಗಿ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ದೃಢೀಕರಿಸಲ್ಪಟ್ಟಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ.
ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ, ಭಾರಿ ಸ್ಫೋಟದ ಸದ್ದು ಕೇಳಿಸಿದೆ ಎನ್ನುವ ವದಂತಿ ಹರಡಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಇಲ್ಲಿಂದ ಯಾವುದೇ ಸ್ಯಾಟ್ಲೈಟ್ ಕರೆ ಹೋಗಿರುವ ಬಗ್ಗೆ ಮಾಹಿತಿ ದೃಢಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂದ್ರಾಳ ಪ್ರದೇಶದ ಅರಣ್ಯದಲ್ಲಿ ಸ್ಫೋಟದ ಶಬ್ದ ಕೇಳಿಸಿದೆ ಎಂಬ ವದಂತಿ ಹರಡುತ್ತಿದೆ. ಈ ಬಗ್ಗೆಯೂ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಕಾಡಾನೆಗಳ ಉಪಟಳ ಅತ್ಯಂತ ಹೆಚ್ಚಾಗಿದೆ. ಅವುಗಳನ್ನು ಓಡಿಸಲು ಸ್ಥಳೀಯರು ಅರಣ್ಯ ಇಲಾಖೆ ನೀಡುವ ಪಟಾಕಿಗಳನ್ನು ಉಪಯೋಗಿಸುತ್ತಿದ್ದು, ಅದರ ಶಬ್ದವೇ ಆಗಿರಬಹುದು ಎಂಬ ಮಾಹಿತಿ ಪೊಲೀಸರ ಪರಿಶೀಲನೆಯ ಸಂದರ್ಭದಲ್ಲಿ ಕಂಡುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸ್ಯಾಟಲೈಟ್ ಕಾಲ್ ಸದ್ದು: ಧರ್ಮಸ್ಥಳ ಪೊಲೀಸರಿಂದ ಅರಣ್ಯದಲ್ಲಿ ಶೋಧ