ಉಳ್ಳಾಲ(ದಕ್ಷಿಣ ಕನ್ನಡ) : ಮರಳು ದಂಧೆಕೋರರು ಮತ್ತೆ ಸಿಸಿಟಿವಿ ಕೆಡವಲು ಯತ್ನಿಸಿರುವ ಘಟನೆ ಸೋಮೇಶ್ವರ ಮೂಡ ಲೇಔಟ್ನಲ್ಲಿ ನಡೆದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ. 6 ರಂದು ನಸುಕಿನ ಜಾವ 2.25 ರ ಸುಮಾರಿಗೆ KA 19z 7354 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದ ತಂಡದ ಪೈಕಿ ಓರ್ವ ಕೆಳಗಿಳಿದು ಸಿಸಿಟಿವಿಯನ್ನು ಕೆಡವಲು ಯತ್ನಿಸಿದ್ದಾನೆ. ಸಿ ಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸದಂತೆ ಜಿಲ್ಲಾಧಿಕಾರಿ, ಮರಳು ಸಮಿತಿ ಅಧ್ಯಕ್ಷರು ಆದೇಶಿಸಿದ್ದರು. ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಒಂದು ವರ್ಷದವರೆಗೆ 24 ಗಂಟೆಗಳ ಕಾಲ ಸಿಸಿಟಿವಿ ವಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಎರಡನೇ ಬಾರಿ ಮರಳು ದಂಧೆಕೋರರು ಸಿಸಿಟಿವಿ ಕೆಡವಲು ಯತ್ನಿಸಿದ್ದಾರೆ. ಈ ಕುರಿತು ಉಳ್ಳಾಲದ ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ನೀಡಿದ ದೂರಿನಡಿ ಪ್ರಕರಣ ದಾಖಲಾಗಿದೆ.
ಕೆಲ ತಿಂಗಳುಗಳ ಹಿಂದೆ ಸೋಮೇಶ್ವರ ಸಮುದ್ರ ತೀರದಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಲಾರಿ ಮೂಲಕ ಡಿಕ್ಕಿ ಹೊಡೆಸಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಅವರು ಮರುದಿನವೇ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.
ಇದನ್ನೂ ಓದಿ: ಉಳ್ಳಾಲ.. ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬಿ ಒಡೆದು ಕಳವು