ಮಂಗಳೂರು: ನಗರದಲ್ಲಿ ಅದೆಷ್ಟೋ ಮಂದಿ ಉದ್ಯೋಗವನ್ನು ಅರಸಿ ವಿದೇಶವನ್ನು ಆಶ್ರಯಿಸಿದ್ದಾರೆ. ಅಂಥವರ ಹೆತ್ತವರು, ರಕ್ತಸಂಬಂಧಿಗಳು ಮಾತ್ರ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಕೋವಿಡ್ ನ ಈ ಸಂಕಷ್ಟ ಕಾಲದಲ್ಲಿ ಅಂತಹ ಹಿರಿಯ ನಾಗರಿಕರ ನೆರವಿಗಾಗಿ 'ನಗರ ಪೊಲೀಸ್ ಹೆಲ್ಪ್ ಲೈನ್' ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹಾಗೂ ಅವರ ಪೊಲೀಸ್ ತಂಡ ಇಂತಹ ಎನ್ಆರ್ ಐಗಳೊಂದಿಗೆ ವೆಬಿನಾರ್ ಮೂಲಕ ಮಾತುಕತೆ ನಡೆಸಿದರು.
'ಸಮನ್ವಯ' ಎಂಬ ಈ ವೆಬಿನಾರ್ ಮೂಲಕ ಮಂಗಳೂರು ಪೊಲೀಸ್ ತಂಡ ಎನ್ಆರ್ ಐಗಳೊಂದಿಗೆ ಸಂಪರ್ಕ ಸಾಧಿಸಿತು. ಸುಮಾರು 20 ದೇಶಗಳ ಒಟ್ಟು 80ಕ್ಕಿಂತಲೂ ಅಧಿಕ ಎನ್ಆರ್ ಐಗಳು ಪೊಲೀಸರೊಂದಿಗೆ ಮಾತುಕತೆ ನಡೆಸಿದರು. ಕೋವಿಡ್ ಸಮನ್ವಯ ಸಂಪರ್ಕ ಸಂಖ್ಯೆ 9480802300 ನಂಬರ್ನ್ನ ಅನಾವರಣಗೊಳಿಸಲಾಯಿತು. ಈ ಮೂಲಕ ಎನ್ಆರ್ ಐಗಳ ಹೆತ್ತವರು, ಕುಟುಂಬಸ್ಥರು ಸಂಕಷ್ಟಕ್ಕೊಳಗಾದಲ್ಲಿ ನೆರವಿಗೆ ಈ ಸಂಖ್ಯೆಗೆ ಕರೆ ಮಾಡಬಹುದು.
ಎನ್ಆರ್ ಐ ಗಳ ರಕ್ತಸಂಬಂಧಿಗಳು ಅಥವಾ ಹೆತ್ತವರಾಗಿರುವ ಹಿರಿಯ ನಾಗರಿಕರು ಯಾರಾದರೂ ಸಂಕಷ್ಟದಲ್ಲಿದ್ದಲ್ಲಿ ನೇರವಾಗಿ ಈ ನಗರ ಪೊಲೀಸ್ ಹೆಲ್ಪ್ ಲೈನ್ ಗೆ ಅವರೇ ಕರೆ ಮಾಡಬಹುದು. ಅದಕ್ಕಾಗಿ 9480802300 ಎಂದು 24x7 ದೂರವಾಣಿ ಸಂಖ್ಯೆಯನ್ನು ಮೀಸಲಿರಿಸಲಾಗಿದೆ. ಅಥವಾ ನೇರವಾಗಿ ಎನ್ಆರ್ ಐಗಳೇ ವಾಯ್ಸ್ ಮೆಸೇಜ್, ದೂರವಾಣಿ ಕರೆ, ಎಸ್ಎಂಎಸ್, ವಿಡಿಯೋ ಸಂದೇಶಗಳ ಮೂಲಕ ಕರೆ ಮಾಡಿ ನೆರವು ಕೇಳಬಹುದು. ಈ ಕರೆಯನ್ನು ಕೋವಿಡ್ ಸಮನ್ವಯದ ಸ್ವ ಸಹಾಯ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಗಂಭೀರ ಹಾಗೂ ಸೂಕ್ಷ್ಮ ಕರೆಗಳನ್ನು ಜಿಲ್ಲಾಡಳಿತದ ವತಿಯಿಂದ ಕಾರ್ಯಾಚರಿಸುತ್ತಿರುವ ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳಿಗೆ ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.