ಮಂಗಳೂರು: ನಗರದ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಾಗಿ ಕೇಂದ್ರ ಸರ್ಕಾರದಿಂದ 190 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 111ಕೋಟಿ ರೂ. ಒಟ್ಟು 301 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ ಈವರೆಗೆ 85,51,26,515 ರೂ. ಬಳಕೆಯಾಗಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಸ್ಮಾರ್ಟ್ ಸಿಟಿ ವಿಭಾಗದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈವರೆಗೆ 7 ಕಾಮಗಾರಿಗಳು ಸಂಪೂರ್ಣವಾಗಿವೆ. ವೆನ್ಲಾಕ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಲ್ಲಿ 37 ಬೆಡ್ಗಳ ಐಸಿಯು, ಕ್ಲಾಕ್ ಟವರ್, ಎರಡು ಸ್ಮಾರ್ಟ್ ಬಸ್ ಸೌಕರ್ಯ ಹಾಗೂ ಇ - ಶೌಚಾಲಯಗಳ ನಿರ್ಮಾಣ, ಸ್ಮಾರ್ಟ್ ಸಿಟಿ ಒಳಾಂಗಣ ವಿನ್ಯಾಸ, ಕ್ಲಾಕ್ ಟವರ್ ನಿಂದ ಎ.ಬಿ.ಶೆಟ್ಟಿ ವೃತ್ತದವರೆಗಿನ ಸ್ಮಾರ್ಟ್ ರಸ್ತೆ ಕಾಮಗಾರಿ. ಈ ಎಲ್ಲ ಕಾಮಗಾರಿಗಳಿಗೆ 10.62 ಕೋಟಿ ರೂ. ವ್ಯಯವಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೇ ಪ್ರಗತಿಯಲ್ಲಿ ಒಟ್ಟು 26 ಕಾಮಗಾರಿಗಳಿವೆ. ಇವುಗಳಲ್ಲಿ ಯುಜಿಡಿ, ಕೆರೆಗಳ ಪುನಶ್ಚೇತನ, ಕದ್ರಿ ಪಾರ್ಕ್ ರಸ್ತೆ ಹಾಗೂ ಉದ್ಯಾನ ಆವರಣದ ಹೊರಗೆ ಸಮಗ್ರ ಅಭಿವೃದ್ಧಿ ಕಾಮಗಾರಿ, ಕೇಂದ್ರ ಮಾರುಕಟ್ಟೆಯ ಪುನರ್ವಸತಿ, ಮಂಗಳಾ ಕ್ರೀಡಾಂಗಣ, ವೆನ್ಲಾಕ್ ಆಸ್ಪತ್ರೆ ಉನ್ನತೀಕರಣ ಮತ್ತಿತರ ಕಾಮಗಾರಿಗಳಿವೆ. ಇದಕ್ಕೆ 558.78 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ 60.58 ಕೋಟಿ ರೂ. ಖರ್ಚಾಗಿದೆ ಎಂದರು.
ಉರ್ವ ಮಾರುಕಟ್ಟೆ ಬಳಿಯ ಕಬಡ್ಡಿ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ, ವೆನ್ಲಾಕ್ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ ಉನ್ನತೀಕರಣ, ಪ್ರದೇಶಾಧಾರಿತ ಅಭಿವೃದ್ಧಿ ಪ್ರದೇಶದಲ್ಲಿ ಎರಡು ಹಂತದ ಒಳಚರಂಡಿ ಪ್ಯಾಕೇಜ್ ಗಳು ಈ ನಾಲ್ಕು ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. ಅದೇ ರೀತಿ ಡಿಪಿಆರ್ ಹಂತದಲ್ಲಿ 5 ಕಾಮಗಾರಿಗಳಿವೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 5 ಕಾಮಗಾರಿಗಳಿದ್ದು, 3 ಕಾಮಗಾರಿಗಳು ಪ್ರಗತಿಯಲ್ಲಿದೆ. 2 ಕಾಮಗಾರಿಗಳು ಟೆಂಡರ್ ಪ್ರಗತಿಯಲ್ಲಿವೆ ಎಂದು ಮೊಹಮ್ಮದ್ ನಜೀರ್ ತಿಳಿಸಿದರು.