ಕಡಬ: ತಾಲೂಕಿನ ಕುಟ್ರುಪಾಡಿ ಗ್ರಾಪಂ ವ್ಯಾಪ್ತಿಯ ಬಲ್ಯ ಗ್ರಾಮದ ಕುದ್ರಡ್ಕ-ಸಂಪಡ್ಕ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬೇಲಿ ತೆರವುಗೊಳಿಸುವ ಮತ್ತು ಕಾಲೋನಿಗೆ ರಸ್ತೆ ನಿರ್ಮಾಣ ಕಾರ್ಯ ನಡೆಯಿತು.
ಪುತ್ತೂರು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಅವರ ಸೂಚನೆಯಂತೆ ಕುಟ್ರುಪಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಲ್ಪೈಡ್ ರೋಡ್ರಿಗಸ್ ಅವರ ನೇತೃತ್ವದಲ್ಲಿ ಕಡಬ ಠಾಣೆಯ ಮತ್ತು ಉಪ್ಪಿನಂಗಡಿ ವಲಯ ಪೊಲೀಸರ ಬಂದೋಬಸ್ತ್ನಲ್ಲಿ ಕಾಲೋನಿ ನಿವಾಸಿಗಳ ಉಪಸ್ಥಿತಿಯಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ.
ಓದಿ: ಸ್ವಾಮಿ 15 ಲಕ್ಷ ಮಾತ್ರ ನನ್ನ ಖಾತೆಗೆ ಹಾಕಿದ್ದು: ನಟಿ ರಾಧಿಕಾ ಕುಮಾರಸ್ವಾಮಿ
ಈ ರಸ್ತೆ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಕಾಲೋನಿ ನಿವಾಸಿಗಳು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿ, ಬ್ಯಾನರ್ ಅಳವಡಿಸಿ ಪ್ರತಿಭಟನೆ ತಯಾರಿ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಕಡಬ ತಹಶೀಲ್ದಾರರು ಭರವಸೆ ನೀಡಿದರೂ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಕಾಲೋನಿ ನಿವಾಸಿಗಳು ಪಟ್ಟು ಹಿಡಿದಿದ್ದರು. ನಂತರದಲ್ಲಿ ಕುಟ್ರುಪಾಡಿ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಮನವೊಲಿಸಿ ಜ. 15ಕ್ಕೆ ಮುಂಚಿತವಾಗಿ ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿ ಚುನಾವಣಾ ಬಹಿಷ್ಕಾರ ಹಿಂತೆಗೆಯುವಂತೆ ಮಾಡಿದ್ದರು.
ನಂತರ ಜ. 2ರಂದು ಪಿಡಿಒ ಸ್ಥಳ ತನಿಖೆಗೆ ತೆರಳಿದ ವೇಳೆ ಅಲ್ಲಿನ ನಿವಾಸಿಗಳು ಪಿಡಿಒ ಹಾಗೂ ಪಂಚಾಯಿತಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದರು. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಇದೀಗ ಸಂಪಡ್ಕ ಕಾಲೋನಿಗೆ ರಸ್ತೆ ಸಂಪರ್ಕ ಮಾಡಲಾಗುತ್ತಿದ್ದು, ಸ್ಥಳೀಯ ಕಾಲೋನಿ ನಿವಾಸಿಗಳು ಅಧಿಕಾರಿಗಳಿಗೆ, ಪಿಡಿಒ, ಪೊಲೀಸರಿಗೆ ಹಾಗೂ ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.