ಮಂಗಳೂರು : ಖ್ಯಾತ ವಿಚಾರವಾದಿ ಪ್ರೊ ನರೇಂದ್ರ ನಾಯಕ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಅಖಿಲ ಭಾರತ ವಿಚಾರವಾದಿ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಪ್ರೊ ನರೇಂದ್ರ ನಾಯಕ್ ಅವರಿಗೆ ಜೀವ ಬೆದರಿಕೆ ಇದ್ದ ಕಾರಣ ಕಳೆದ 7 ವರ್ಷಗಳಿಂದ ಗನ್ ಮ್ಯಾನ್ ಭದ್ರತೆಯನ್ನು ನೀಡಲಾಗಿತ್ತು. ಆದರೆ ಬುಧವಾರ ದಿನ ಏಕಾಏಕಿ ಅವರಿಗೆ ಗನ್ ಮ್ಯಾನ್ ವಿಚಾರದಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯಿಂದ ಪತ್ರ ಬಂದಿದೆ. ಅದರಲ್ಲಿ ಭದ್ರತೆಯನ್ನು ಮುಂದುವರಿಸಲು ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ. ಆದರೆ ಇದಕ್ಕೆ ನರೇಂದ್ರ ನಾಯಕ್ ಪೊಲೀಸ್ ಇಲಾಖೆಗೆ ಪತ್ರ ಬರೆದು ಶುಲ್ಕ ಭರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದರಿಂದಾಗಿ ಅವರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.
ಈ ವಿಷಯ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ನರೇಂದ್ರ ನಾಯಕ್ ಅವರು, ನನಗೆ ಕಳೆದ 7 ವರ್ಷಗಳಿಂದ ಗನ್ ಮ್ಯಾನ್ ನೀಡಲಾಗಿತ್ತು. ಈವರೆಗೆ ಶುಲ್ಕ ಪಾವತಿಸಲು ಸೂಚಿಸಿರಲಿಲ್ಲ. ಇದೀಗ ಏಕಾಏಕಿ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ. ನನ್ನಲ್ಲಿ ಶುಲ್ಕ ಪಾವತಿಸಲು ಹಣ ಇಲ್ಲ ಎಂದು ಹೇಳಿದ್ದೇನೆ. ನನಗೀಗ 73 ವರ್ಷ. ನನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ, ಸರ್ಕಾರ ನೇರ ಹೊಣೆ- ಡಿವೈಎಫ್ಐ : ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ನಿರಂತರ ಪವಾಡ ರಹಸ್ಯ ಬಯಲಿಗೆಳೆಯುವ ಕಾರ್ಯಕ್ರಮಗಳನ್ನು ಮಾಡುತ್ತಿರುವ ನರೇಂದ್ರ ನಾಯಕ್ ಅವರಿಗೆ ಜೀವ ಬೆದರಿಕೆ ಇದೆ. ಈ ಸಲುವಾಗಿ ಈವರೆಗೆ ನೀಡಲಾಗುತ್ತಿದ್ದ ಅಂಗರಕ್ಷಕ ಭದ್ರತೆಯನ್ನು ಪೊಲೀಸ್ ಇಲಾಖೆ ಏಕಾಏಕಿ ರದ್ದುಗೊಳಿಸಿದೆ. ಇದಕ್ಕೆ ತೀವ್ರವಾಗಿ ಅಸಮಾಧಾನ ಹೊರ ಹಾಕಿರುವ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ದ.ಕ ಜಿಲ್ಲಾ ಸಮಿತಿ ಪೊಲೀಸ್ ಇಲಾಖೆಯ ಈ ನಡೆಯನ್ನು ವಿರೋಧಿಸುತ್ತದೆ ಎಂದು ತಿಳಿಸಿದೆ. ನರೇಂದ್ರ ನಾಯಕ್ ಅವರ ಜೀವಕ್ಕೆ ತೊಂದರೆಯಾಗುವಂತಹ ಯಾವುದೇ ಅನಾಹುತಗಳು ಸಂಭವಿಸಿದರೇ ಅದಕ್ಕೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆ ಎಂದು ಸಹಾ ಎಚ್ಚರಿಸಿದೆ.
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೂ ನರೇಂದ್ರ ನಾಯಕರ ಅಂಗರಕ್ಷಕ ಭದ್ರತೆಯನ್ನು ರದ್ದುಗೊಳಿಸಿರುವುದರ ಬಗ್ಗೆ ಹಲವು ಅನುಮಾನಗಳು ಎದ್ದು ಕಾಣುತ್ತಿದೆ. ನರೇಂದ್ರ ನಾಯಕರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಈವರೆಗೆ ನೀಡಲಾಗುತ್ತಿದ್ದ ಗನ್ ಮ್ಯಾನ್ ಭದ್ರತೆಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಿದೆ. ಈ ಹಿಂದಿನಂತೆ ಯಾವುದೇ ಷರತ್ತುಗಳಿಲ್ಲದ ಅಂಗರಕ್ಷಕ ಭದ್ರತೆಯನ್ನು ಒದಗಿಸಿ ಕೊಡಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಇದನ್ನೂ ಓದಿ : ಪುತ್ತೂರು ಬಸ್ ನಿಲ್ದಾಣಕ್ಕೆ 'ಕೋಟಿ ಚೆನ್ನಯ' ಹೆಸರಿಡುವ ಮೂಲಕ ಅವಳಿ ವೀರರ ನೆನಪಿಸುವ ಕಾರ್ಯ: ಶಾಸಕ ಮಠಂದೂರು