ಪುತ್ತೂರು: ತೋಟಗಾರಿಕೆ ಇಲಾಖೆಯ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಸವಲತ್ತು ಒದಗಿಸುವ ನಿಟ್ಟಿನಲ್ಲಿ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಹೇಳಿದರು.
ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸವಲತ್ತು ವಿತರಣೆ ವಿಳಂಬದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಸಲಕರಣೆಗಳನ್ನು ಉತ್ಪನ್ನ ಮಾರಾಟ ಕಂಪೆನಿಯ ಮೂಲಕ ರೈತರಿಗೆ ನೇರವಾಗಿ ತಲುಪಿಸಲು ಸರ್ಕಾರ ನಿರ್ಧರಿಸಿದ ಕಾರಣ ಕೆಲ ಸವಲತ್ತು ಸಿಗಲು ವಿಳಂಬವಾಗಿತ್ತು. ಈಗ ಆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಪೂರೈಕೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದು ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಸಿಬ್ಬಂದಿ ಶೀಘ್ರ ನೇಮಕ:
ಪುತ್ತೂರು ನಗರಸಭೆಯಲ್ಲಿ ಶೇ.60 ಕ್ಕಿಂತ ಅಧಿಕ ಹುದ್ದೆ ಖಾಲಿ ಇರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲ ತಾಂತ್ರಿಕ ಕಾರಣಗಳಿಂದ ನೇಮಕಾತಿಗೆ ತೊಡಕು ಉಂಟಾಗಿತ್ತು. ಪ್ರಸ್ತುತ ಹುದ್ದೆ ಭರ್ತಿ ಬಗ್ಗೆ ಪ್ರಕ್ರಿಯೆ ಆರಂಭಿಸಿದ್ದು, ಪುತ್ತೂರು ಸೇರಿದಂತೆ ರಾಜ್ಯದ ಸ್ಥಳೀಯಾಡಳಿತಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.