ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿ ಮತ್ತು ಸಿಐಡಿ ಎಸ್ಪಿ ರವಿ ಡಿ. ಚನ್ನಣ್ಣನವರ್ ತಾವು ಈ ಹಿಂದೆ ತೋಟವೊಂದರಲ್ಲಿ ಕೆಲಸ ಮಾಡಿದ್ದ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ನೆಟ್ಟಣ ಪೇಟೆಗೆ ಭೇಡಿ ನೀಡಿದರು. ಈ ವೇಳೆ 30 ವರ್ಷದ ಹಿಂದಿನ ಒಡನಾಟವನ್ನು ಹಂಚಿಕೊಂಡರು.
ತಮ್ಮ ಸ್ನೇಹಿತರ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಬಂದಿದ್ದ ಇವರು, ಈ ವೇಳೆ ಕುಕ್ಕೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಸಂಚರಿಸುವ ದಾರಿ ಮಧ್ಯೆ ಇರುವ ನೆಟ್ಟಣದ ಪ್ರಕಾಶ್ ಎಂಬುವರ ಹೋಟೆಲ್ಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಸುಮಾರು 30 ವರ್ಷ ಹಿಂದೆ ನೆಟ್ಟಣದ ಸಮೀಪದ ಮೇರುಂಜಿ ಎಂಬಲ್ಲಿ ತೋಟವೊಂದರಲ್ಲಿ ರವಿ.ಡಿ ಚನ್ನಣ್ಣನವರ್ ಅವರು ಕೂಲಿ ಕೆಲಸ ಮಾಡುವ ಸಲುವಾಗಿ ಕುಟುಂಬದ ಸದಸ್ಯರ ಜೊತೆಗೆ ಬಂದಿದ್ದರು. ಅಂದು ಅವರು ಇಲ್ಲಿ ಕೆಲಸಕ್ಕೆ ಬರುವಾಗ ಇದ್ದ ರೈಲ್ವೆ ಸೇತುವೆಯೊಂದು ಇಂದಿಗೂ ಅದೇ ರೀತಿ ಇರುವುದನ್ನು ಕಂಡರು.
ಅಲ್ಲದೇ ನೆಟ್ಟಣ ಎಂಬ ಈ ಪುಟ್ಟ ಗ್ರಾಮ ಸಹ ಅದೇ ರೀತಿ ಇರುವುದನ್ನು ಕಂಡು ಆಶ್ಚರ್ಯಚಕಿತರಾದರು. ಈ ವೇಳೆ ಅಲ್ಲಿದ್ದವರನ್ನು ಮಾತನಾಡಿಸಿ, ತಾವು ಈ ಹಿಂದೆ ಓಡಾಡಿದ ದಿನಗಳನ್ನು ನೆನೆಪು ಮಾಡಿಕೊಂಡರು. ಹೋಟೆಲ್ ಮಾಲೀಕ ಪ್ರಕಾಶ್ ಅವರೊಂದಿಗೆ ಚಹಾ ಕುಡಿದ ಚನ್ನಣ್ಣನವರ್ ಮತ್ತೆ ಬರುವುದಾಗಿ ಹೇಳಿ ತೆರಳಿದರು.