ಪುತ್ತೂರು (ದಕ್ಷಿಣ ಕನ್ನಡ): ಹಲವು ಪ್ರಕಾರ, ಆಕಾರಗಳ ಹಾವುಗಳಿದ್ದರೂ, ಅವುಗಳಲ್ಲಿ ಕೆಲವು ಮಾತ್ರ ಜನರ ಗಮನ ಸೆಳೆಯುತ್ತವೆ. ಆದರೆ ಇಂಥ ಅನೇಕ ಪ್ರಬೇಧಗಳ ಹಾವುಗಳು ಜನರ ಗಮನಕ್ಕೂ ಬಾರದೇ ದಟ್ಟ ಅರಣ್ಯಗಳ ಮಧ್ಯೆ ತಮ್ಮ ಪಾಡಿಗೆ ಬದುಕುತ್ತಿವೆ. ಇಂಥದೇ ದಟ್ಟಾರಣ್ಯಗಳ ಮಧ್ಯೆ ಸ್ವಚ್ಛಂದವಾಗಿ ವಿಹರಿಸುವ ಅಪರೂಪದ ಹಾವೊಂದು ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಎಂಬವರ ಮನೆಯ ಟೇಬಲ್ ಮೇಲೆ ಹರಿದಾಡುತ್ತಿತ್ತು. ಪುತ್ತೂರಿನ ಯುವ ಉರಗತಜ್ಞ ತೇಜಸ್ ಬನ್ನೂರು ಅವರು ಆ ಹಾವನ್ನು ರಕ್ಷಿಸಿ ಮತ್ತೆ ಅದರ ವಾಸಸ್ಥಾನ ದಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.
ಫಾರ್ಸ್ಟೆನ್ ಕ್ಯಾಟ್ ಸ್ನೇಕ್ (ಬೆಕ್ಕು ಕಣ್ಣಿನ ಹಾವು) ಎಂದು ಕರೆಯಲಾಗುವ ಈ ಹಾವನ್ನು ನೋಡಿದ ಉರಗತಜ್ಞ ತೇಜಸ್ ಅವರು, ಪುತ್ತೂರಿನಲ್ಲಿ ಈ ರೀತಿಯ ಹಾವು ಪತ್ತೆಯಾಗಿರುವುದೇ ಅಪರೂಪ ಎಂದಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಾವು ಹಿಡಿದು ಅವುಗಳ ರಕ್ಷಣೆ ಮಾಡುತ್ತಿರುವ ತೇಜಸ್ ಕಳೆದ ಹಲವು ವರ್ಷಗಳಿಂದ ಹಲವು ರೀತಿಯ, ಹಲವು ಪ್ರಕಾರದ ಹಾವುಗಳನ್ನು ರಕ್ಷಣೆ ಮಾಡಿದ್ದು, ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಹಾವುಗಳನ್ನು ರಕ್ಷಿಸಿದ್ದಾರೆ. ಹೆಚ್ಚಾಗಿ ಪಶ್ಚಿಮ ಘಟ್ಟದಂತಹ ದಟ್ಟ ಅರಣ್ಯಗಳ ಮಧ್ಯೆಯೂ ಅಪರೂಪವಾಗಿ ಕಾಣಸಿಗುತ್ತವೆ ಈ ಬೆಕ್ಕು ಕಣ್ಣಿನ ಹಾವು.
ಈ ಹಾವಿನ ಕಣ್ಣಿನಿಂದಲೇ ಇದಕ್ಕೆ ಇಂಥ ಹೆಸರು ಬಂದಿದೆ. ಬೆಕ್ಕಿನ ಕಣ್ಞಿನಂತೆ ಬಿಳಿ ಕಣ್ಣುಗಳನ್ನು ಹೊಂದಿರುವ ಹಾವು ರಾತ್ರಿ ವೇಳೆಯಲ್ಲೇ ಸಂಚರಿಸುತ್ತದೆ. ರಾತ್ರಿಯಲ್ಲಿ ಬೆಕ್ಕಿನ ಕಣ್ಣುಗಳಂತೆಯೇ ಹೊಳೆಯುವ ಕಣ್ಣುಗಳು ಅತ್ಯಂತ ಆಕರ್ಷಕವೂ ಆಗಿದೆ. ರಾತ್ರಿ ವೇಳೆಯಲ್ಲೇ ಬೇಟೆಗಿಳಿಯುವ ಈ ಹಾವು ಹಕ್ಕಿಗಳ ಮೊಟ್ಟೆ, ಸಣ್ಣ ಗಾತ್ರದ ಹಕ್ಕಿ, ಓತಿಕ್ಯಾತ ಸೇರಿದಂತೆ ಹಲವು ಸಣ್ಣ ಗಾತ್ರದ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುತ್ತದೆ. ವಿಷಕಾರಿಯಲ್ಲದ ಈ ಹಾವು ತನ್ನ ರಕ್ಷಣೆಗಾಗಿ ಕಚ್ಚುತ್ತದೆ. ಆದರೆ ಈ ಹಾವು ಕಚ್ಚಿದಲ್ಲಿ ಯಾವುದೇ ತೊಂದರೆಯೂ ಇಲ್ಲ ಎನ್ನುತ್ತಾರೆ ಉರಗ ತಜ್ಞ ತೇಜಸ್.
ಹಳದಿ ಬಣ್ಣದಲ್ಲಿ ಕಂದು ಬಣ್ಣದ ಪಟ್ಟೆಗಳನ್ನು ಹೊಂದಿರುವ ಈ ಹಾವು ಕನ್ನಡಿ ಹಾವನ್ನೇ ಹೋಲುತ್ತವೆ. ಈ ಕಾರಣಕ್ಕಾಗಿಯೇ ಅಪರೂಪದ ಹಾವುಗಳ ಜನರ ಕಣ್ಣಿಗೆ ಬಿದ್ದಲ್ಲಿ ಜನರ ಕೈಗೆ ಸಿಕ್ಕಿ ಸಾಯುವುದೂ ಕೂಡಾ ಹೆಚ್ಚು. ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಬೆಳೆಯುತ್ತವೆ. ಕೆರೆ ಹಾವಿನಷ್ಟೇ ಉದ್ದಕ್ಕೆ ಬೆಳೆಯುವ ಇದು ಅಪರೂಪವೆಂಬಂತೆ ನಾಡಲ್ಲಿ ಪತ್ತೆಯಾಗಿದೆ. ಪುತ್ತೂರಿನ ಬಲ್ನಾಡು ನಿವಾಸಿ ರವಿಕೃಷ್ಣ ಕಲ್ಲಜೆ ಮನೆಯ ಟೇಬಲ್ ಮೇಲೆ ಹಳದಿ ಬಣ್ಣದ ವಸ್ತು ಬಿದ್ದಿರುವುದನ್ನು ಗಮನಿಸಿದ್ದಾರೆ. ಹತ್ತಿರಕ್ಕೆ ಹೋಗಿ ಪರಿಶೀಲಿಸಿದಾಗ ಟೇಬಲ್ ಮೇಲೆ ಆರಾಮವಾಗಿ ಮಲಗಿರುವುದು ಹಳದಿ ಬಣ್ಣದ ಹಾವೆಂದು ಅವರ ಗಮನಕ್ಕೆ ಬಂದಿದೆ. ಕೂಡಲೇ ಉರಗತಜ್ಞ ತೇಜಸ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ತೇಜಸ್ ಅವರು ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಹಂಪಿಯಲ್ಲಿ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆ: ವಿಡಿಯೋ