ಬೆಳ್ತಂಗಡಿ: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಆಯ್ಕೆಯಾಗಿದೆ.
1991ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಪ್ರಾರಂಭಿಸಲಾಯಿತು. ಕ್ರಿ.ಶ. 11ನೇ ಶತಮಾನದ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟ ರಾಷ್ಟ್ರಕೂಟ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ರಾಣೆಬೆನ್ನೂರಿನ ಹಿರೇಮಾಗನೂರು ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನ, ಕ್ರಿ.ಶ. 10ನೇ ಶತಮಾನದ ರಾಷ್ಟ್ರಕೂಟರ ಶಿಲ್ಪಕಲಾ ಶೈಲಿಯ ಹಾನಗಲ್‌ನ ಎಳವಟ್ಟಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನವನ್ನು ಸಂರಕ್ಷಿಸಲಾಗಿದೆ.
ಕ್ರಿ.ಶ. 11ನೇ ಶತಮಾನದಲ್ಲಿ ನಿರ್ಮಿತವಾದ ರಾಷ್ಟ್ರಕೂಟ ಹಾಗೂ ಹೊಯ್ಸಳ ಶಿಲ್ಪಕಲಾ ಶೈಲಿಯ ಬ್ಯಾಡಗಿಯ ಮುತ್ತೂರಿನ ಕಲ್ಲೇಶ್ವರ ದೇವಸ್ಥಾನ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಐತಿಹಾಸಿಕ, ಪುರಾತನ ದೇವಾಲಯಗಳನ್ನು ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗಿದೆ. ರಾಜ್ಯದ 25 ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 257 ದೇವಾಲಯಗಳು ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾರ್ಯಕ್ಕಾಗಿ 29.34 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.