ಮಂಗಳೂರು: ಮೀನುಗಾರರ ರಕ್ಷಣೆ ಹಾಗೂ ಅವರ ಮಾಹಿತಿ ಕಲೆ ಹಾಕುವ ಹಿನ್ನೆಲೆ, ಕ್ಯೂ ಆರ್ ಕೋಡ್ ಆಧಾರಿತ ಬಯೋಮೆಟ್ರಿಕ್ ಕಾರ್ಡ್‌ಗಳನ್ನು ಹೊಂದುವುದು ಕಡ್ಡಾಯ. ಹಾಗಾಗಿ ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ ಆಧಾರ್ ಕಾರ್ಡ್‌ಗಳನ್ನು ಕಡ್ಡಾಯಗೊಳಿಸುವ ನಿರ್ಣಯ ಕೈಗೊಂಡಿದ್ದು, ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿಂದು ನಡೆದ ಕರಾವಳಿ ಮೀನುಗಾರಿಕೆ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಡಳಿತದ ವತಿಯಿಂದ “ಸೇವಾ ಸಿಂಧು” ವೆಬ್‍ಸೈಟ್‍ನಲ್ಲಿ ಈ ಕಾರ್ಡನ್ನು ಒದಗಿಸಲು ಅಥವಾ ಆಯಾ ಮೀನುಗಾರಿಕಾ ಇಲಾಖೆಯಲ್ಲಿ ದೊರಕುವಂತೆ ಮಾಡಲು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದರು.
ಕಿಸಾನ್ ಕಾರ್ಡ್ ಮುಖಾಂತರ ಕೃಷಿಕರಿಗೆ ಸಾಕಷ್ಟು ಸೌಲಭ್ಯಗಳು ದೊರಕುತ್ತಿದೆ. ಆದರೆ ಕೃಷಿಕರಿಗೆ ಸಿಗುವಷ್ಟು ಸವಲತ್ತು ಮೀನುಗಾರರಿಗೆ ಸಿಗುತ್ತಿಲ್ಲ. ಮೀನುಗಾರರಿಗೂ ಕಿಸಾನ್ ಕಾರ್ಡ್‌ನಲ್ಲಿ ಸೌಲಭ್ಯ ಒದಗಿಸಿಕೊಡಬೇಕೆಂದು ಸಂವಾದದಲ್ಲಿ ತಿಳಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು, ಈ ವಿಚಾರವನ್ನು ಮೀನುಗಾರಿಕೆ ನಿರ್ದೇಶಕರು, ಲೀಡ್ ಬ್ಯಾಂಕ್ ಮ್ಯಾನೇಜರ್, ಸಂಬಂಧಪಟ್ಟ ಅಧಿಕಾರಿ ಸೇರಿದಂತೆ ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ. ಅಲ್ಲದೇ, ಜಿಲ್ಲೆಯಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ 20% ನುರಿತ ಮೀನುಗಾರರಿಗೆ ಕರಾವಳಿ ಕಾವಲು ಪಡೆಯಲ್ಲಿ ಉದ್ಯೋಗ ಮೀಸಲಿಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚಿಂತನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ರೂಪಾಲಿ ನಾಯ್ಕ್, ಲಾಲಾಜಿ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೀನುಗಾರಿಕೆ ನಿರ್ದೇಶಕ ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.