ಮಂಗಳೂರು : ಪುತ್ತೂರಿನಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ನೈಜ ಆರೋಪಿಯನ್ನು ಬಂಧಿಸದೆ ಸಂತ್ರಸ್ತೆಯ ಅಣ್ಣನನ್ನು ಬಂಧಿಸಿದ್ದಾರೆ ಎಂದು ಸಂತ್ರಸ್ತೆ ಮತ್ತು ದಲಿತ ಸಂಘಟನೆಗಳು ಆರೋಪಿಸಿವೆ.
ಪುತ್ತೂರಿನ ಸಂಘಟನೆಯೊಂದರ ಮುಖಂಡ ಮತ್ತು ರಾಜಕೀಯ ಪ್ರಭಾವ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಇವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊರಗಜ್ಜ ದೈವದ ಆಣೆಪ್ರಮಾಣ ಮಾಡಿಸಿ ಬೆದರಿಸಿದ್ದರು. ನಿರಂತರ ಅತ್ಯಾಚಾರದಿಂದ ಆಕೆ ಗರ್ಭಿಣಿಯಾಗಿದ್ದು, ಹೆರಿಗೆಯ ವೇಳೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆಪಾದಿಸಿದೆ.
ಅತ್ಯಾಚಾರ ಆರೋಪಿಯು ಪ್ರಭಾವ ಬಳಸಿ ಸಂತ್ರಸ್ತೆಗೆ ಹೆರಿಗೆಯ ವೇಳೆ ಆಸ್ಪತ್ರೆ ಸಿಬ್ಬಂದಿ ಮೂಲಕ ಬಾಲಕಿಯಿಂದ ಆತನ ಹೆಸರನ್ನು ಬರೆಸದೆ ಬೇರೆಯವರ ಹೆಸರು ಬರೆಸಿದ್ದಾರೆ.
ಬೇರೆ ವ್ಯಕ್ತಿಯು ಈ ಪ್ರಕರಣದಲ್ಲಿ ಭಾಗಿಯಾಗದಿದ್ದರೂ ಆತನ ಹೆಸರು ಬರೆಯಲಾಗಿದೆ. ಆದರೆ, ಬಳಿಕ ಖಾಲಿ ಕಾಗದದಲ್ಲಿ ಸಹಿ ಮಾಡಿಸಿ ಸಂತ್ರಸ್ತೆಯ ಅಣ್ಣನ ಹೆಸರನ್ನು ಬರೆಸಿದ್ದು, ಪೊಲೀಸರು ಆತನನ್ನೇ ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸಂತ್ರಸ್ತೆಯು ತನ್ನ ಮೇಲೆ ಸಂಘಟನೆಯೊಂದರ ಮುಖಂಡನೇ ಅತ್ಯಾಚಾರ ಎಸಗಿದ್ದು, ನನ್ನ ಅಣ್ಣನನ್ನು ವಿನಾಕಾರಣ ಸಿಲುಕಿಸಲಾಗಿದೆ. ಅತ್ಯಾಚಾರ ನಡೆಸಿರುವ ಆರೋಪಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರನ್ನು ನೀಡಲಾಗಿದೆ. ನ್ಯಾಯ ಸಿಗದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘಟನೆಯವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Watch: ಮಕ್ಕಳೊಂದಿಗೆ ಜೀವಂತ ಸಮಾಧಿಯಾಗುವ ಮುನ್ನ ಪ್ರವಾಹದ ವಿಡಿಯೋ ಮಾಡಿದ್ದ ಫೌಜಿಯಾ