ಪುತ್ತೂರು: ಪುತ್ತೂರು ನಗರಕ್ಕೆ ಮಂಜೂರಾಗಿರುವ 'ಜಲ ಸಿರಿ'- ನಿರಂತರ ಕುಡಿಯುವ ನೀರು ಯೋಜನೆಯಡಿ ತರಾತುರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳನ್ನು ನಡೆಸಿ, ಆಕ್ಷೇಪಣೆಗಳನ್ನು ಪರಿಗಣಿಸದೆ ನೋಂದಾವಣೆ ಮಾಡಿರುವ ಕುರಿತು ಸೂಕ್ತ ತನಿಖೆ ನಡೆಸಿ ಮುಂದಿನ ನಗರಸಭಾ ಸಾಮಾನ್ಯ ಸಭೆಯಲ್ಲಿ ವರದಿಯನ್ನು ಸಲ್ಲಿಸಲಾಗುವುದು ಎಂದು ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ ಜೈನ್ ತಿಳಿಸಿದ್ದಾರೆ.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ಬುಧವಾರ ಪುತ್ತೂರು ನಗರಸಭೆಯ ಸಾಮಾನ್ಯ ಸಭೆ ನಡೆಯಿತು. ಜಲ ಸಿರಿ ಯೋಜನೆಯ ಕುರಿತು ಪ್ರಸ್ತಾಪಿಸಿದ ಸದಸ್ಯ ಭಾಮಿ ಅಶೋಕ್ ಶೆಣೈ, ನಗರಸಭೆ ವ್ಯಾಪ್ತಿಯ ಸೀಟು ಗುಡ್ಡೆ ಎಂಬಲ್ಲಿ ಜಲ ಸಂಗ್ರಹಗಾರ ನಿರ್ಮಾಣ ಯೋಜನೆಗೆ ಜಮೀನು ಖರೀದಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಜಮೀನು ಸ್ವಾಧೀನತೆಗೆ ಸಂಬಂಧಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದರೂ, ಅದಾವುದನ್ನೂ ಪರಿಗಣಿಸದೆ ಏಕಾಏಕಿಯಾಗಿ ಜಮೀನು ಖರೀದಿ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ರಿಜಿಸ್ಟ್ರೇಶನ್ ಮಾಡಲಾಗಿದೆ. ಹಾಗಿದ್ದರೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು ಯಾಕಾಗಿ? ಇದರ ಹಿಂದೆ ಬಹಳಷ್ಟು ಅವ್ಯವಹಾರಗಳು ನಡೆದಿರುವುದು ಸ್ಪಷ್ಟವಾಗಿದೆ. ಈ ಕುರಿತು ನಗರಸಭೆಯ ಪೌರಾಯುಕ್ತರು ಸ್ಪಷ್ಟನೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೂಪಾ ಡಿ. ಶೆಟ್ಟಿ, ಜಲ ಸಿರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರು ದರ ನಿರ್ಧರಣಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಅ.21 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಸಿಸ್ಟೆಂಟ್ ಕಮಿಷನರ್, ಸದಸ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ದರ ನಿರ್ಧರಣಾ ಸಮಿತಿ ಸಭೆ ನಡೆದಿದ್ದು, ಇಲ್ಲಿ ದರ ನಿರ್ಧಾರ ಮಾಡಲಾಗಿತ್ತು. ಇಲ್ಲಿ ಒಂದು ಎಕರೆಗೆ ರೂ. 3 ಕೋಟಿ ಪಾವತಿಸಲು ನಿರ್ಧರಿಸಲಾಗಿತ್ತು. ಇದಾದ ಬಳಿಕ ನ.15 ರಂದು ಈ ಕುರಿತು ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಇದರಲ್ಲಿ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ ಎಂದು ತಿಳಿಸಲಾಗಿತ್ತು. ಆದರೆ, ಆಕ್ಷೇಪಣೆ ಸಲ್ಲಿಕೆಗೆ ಕಾಲಾವಧಿ ದರ ನಿರ್ಧರಣಾ ಸಮಿತಿಯ ಸಭೆಯ ದಿನಾಂಕದಿಂದಲೇ ಅನ್ವಯವಾಗುತ್ತದೆ. ಅದಾದ ಬಳಿಕದ ದೂರು, ಆಕ್ಷೇಪಣೆಗಳನ್ನು ಪರಿಗಣಿಸಲಾಗಿಲ್ಲ ಎಂದು ರೂಪಾ ಶೆಟ್ಟಿ ತಿಳಿಸಿದರು.
ಪೂರ್ವಾನ್ವಯವಾಗುವುದು ಹೇಗೆ? ಹಾಗಿದ್ದರೆ ಆಕ್ಷೇಪಣೆಗಳಿಗೆ ಆಹ್ವಾನ ನೀಡಿದ್ದು ಯಾಕಾಗಿ? ಮೊದಲೇ ದರ ನಿಗದಿಪಡಿಸಿ ಬಳಿಕ ಆಕ್ಷೇಪಣೆಗಳಿಗೆ ಯಾಕಾಗಿ ಪ್ರಕಟಣೆಗಳನ್ನು ನೀಡಿದ್ದೀರಿ? ಅಷ್ಟೊಂದು ತರಾತುರಿಯಲ್ಲಿ, ಒತ್ತಡದಲ್ಲಿ ನೋಂದಾವಣೆ ಮಾಡಿರುವುದು ಯಾಕಾಗಿ? ಇದರಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿರುವುದು ಸ್ಪಷ್ಟ ಎಂದು ಅಶೋಕ್ ಶೆಣೈ ಹೇಳಿದರು.
ಅವ್ಯವಹಾರ ನಡೆದಿಲ್ಲವೆಂದಾದರೆ ರಾಜೀನಾಮೆ:
ಜಲ ಸಿರಿ ಯೋಜನೆಯಡಿ ರೂ.30 ಲಕ್ಷ ಮೊತ್ತದ ಅವ್ಯವಹಾರ ನಡೆದಿರುವುದು ಖಚಿತ. ನಗರಸಭೆಯ ಕಟ್ಟಡದ ಕೆಳಭಾಗದಲ್ಲಿ ಕಾರಿನಲ್ಲಿ ನಗದು ಹಸ್ತಾಂತರವಾಗಿದೆ. ಈ ಕುರಿತು ಆಣೆ ಪ್ರಮಾಣಕ್ಕೂ ನಾನು ಸಿದ್ಧ. ಈ ಯೋಜನೆಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸಾಬೀತಾದರೆ ನಾನು ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎಂದು ಸದಸ್ಯ ಭಾಮಿ ಅಶೋಕ್ ಶೆಣೈ ಸಭೆಯಲ್ಲಿ ತಿಳಿಸಿದರು.
ಕುಡಿಯುವ ನೀರು ಯೋಜನೆಯ ಕುರಿತು ಮುಂದಿನ 15 ದಿನಗಳೊಳಗಾಗಿ ಸಭೆ ಏರ್ಪಡಿಸೋಣ. ಈ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತಿತರರು ಪಾಲ್ಗೊಂಡು ಯೋಜನೆಯ ಕುರಿತು ಚರ್ಚಿಸಿ ಒಮ್ಮತದ ನಿರ್ಣಯಗಳನ್ನು ಕೈಗೊಳ್ಳೋಣ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದು, ಇದಕ್ಕೆ ಸಭೆ ಸಹಮತ ವ್ಯಕ್ತಪಡಿಸಿತು.
ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ:
ಪುತ್ತೂರು ನಗರಕ್ಕೆ ಪ್ರಸ್ತುತ ಕುಮಾರಾಧಾರಾ ನದಿಯಿಂದ ನೀರನ್ನು ಪೂರೈಸಲಾಗುತ್ತಿದೆ. ಇಲ್ಲಿನ ಒಳಚರಂಡಿ ನೀರು ಕುಡಾ ಇದೇ ನದಿಗೆ ಸೇರುತ್ತಿದೆ. ಇದನ್ನು ತಪ್ಪಿಸಿ ಶುದ್ಧ ಕುಡಿಯುವ ನೀರು ಪೂರೈಸಲು ಈಗಾಗಲೇ ರೂ. 125 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಡಿ. 5ರಂದು ಕರ್ನಾಟಕ ಬಂದ್: ಬಿಗಿಭದ್ರತೆಗೆ ಕಮಲ್ ಪಂತ್ ವಿಶೇಷ ಸೂಚನೆ
ನಗರಸಭೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾದ ಬಳಿಕ ಇದೀಗ ನಡೆದಿರುವ ಪ್ರಥಮ ಸಾಮಾನ್ಯ ಸಭೆಯಲ್ಲಿ ಎಲ್ಲರೂ ಪಾಲ್ಗೊಂಡಿದ್ದಾರೆ. ಸ್ವಚ್ಛ, ಸುಂದರ ಪುತ್ತೂರಿನ ನಿರ್ಮಾಣಕ್ಕೆ ಸದಸ್ಯರೆಲ್ಲರೂ ಶ್ರಮಿಸಬೇಕಾಗಿದೆ. ಈ ಮೂಲಕ 6ನೇ ಸ್ಥಾನದಲ್ಲಿರುವ ನಗರಸಭೆಯನ್ನು ಮೊದಲ ಸ್ಥಾನಕ್ಕೇರಿಸಬೇಕು ಎಂದು ಶಾಸಕರು ಸಲಹೆ ನೀಡಿದರು. ರೂ. 13 ಕೋಟಿ ವೆಚ್ಚದಲ್ಲಿ ನಗರಸಭೆ ನೂತನ ಕಟ್ಟಡ ನಿರ್ಮಾಣವಾಗಲಿದ್ದು, ಈಗಾಗಲೇ ರೂ. 5 ಕೋಟಿ ಮಂಜೂರಾಗಿದೆ ಎಂದರು.
ಶುಲ್ಕ ಇಳಿಕೆಗೆ ಕ್ರಮ:
ನಗರದಲ್ಲಿ ಘನ ತ್ಯಾಜ್ಯ ಶುಲ್ಕ ಮೊತ್ತವನ್ನು ಶೇ. 15 ರಿಂದ 23ಕ್ಕೇರಿಸಲಾಗಿದ್ದು, ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಇದನ್ನು ಕಡಿಮೆಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಕೆ. ಸಂತೋಷ್ ಕುಮಾರ್ ಒತ್ತಾಯಿಸಿದರು. ನಗರಸಭೆಗೆ ಆಡಳಿತಾಧಿಕಾರಿಯವರು ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಮೊತ್ತ ಹೆಚ್ಚಳವಾಗಿದೆ. ಶುಲ್ಕ ಇಳಿಕೆ ಮಾಡುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಜೀವಂಧರ್ ಜೈನ್ ಉತ್ತರಿಸಿದರು.