ಪುತ್ತೂರು: ತಾಲೂಕಿನಲ್ಲಿ ನಡೆದ ಎರಡನೇ ಹಂತದ ಗ್ರಾ.ಪಂ ಚುನಾವಣೆಯಲ್ಲಿ ಶೇ 78 ರಷ್ಟು ಮತದಾನವಾಗಿದ್ದು,731 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ತಾಲೂಕಿನ 22 ಗ್ರಾ.ಪಂಗಳ 322 ಸ್ಥಾನಗಳಿಗೆ ಶಾಂತಿಯುತ ಮತದಾನ ನಡೆದಿದೆ. ತಾಲೂಕಿನಲ್ಲಿ ಒಟ್ಟು 84,331 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 41,976 ಪುರುಷರು ಮತ್ತು 42,355 ಮಹಿಳೆಯರು ಮತ ಚಲಾಯಿಸಿದ್ದಾರೆ.
ತಾಲೂಕಿನ ಹಂಟ್ಯಾರು ಶಾಲಾ ಮತಗಟ್ಟೆಯಲ್ಲಿ ಮತದಾರರಿಗೆ ಮಾದರಿ ಮತಪತ್ರಗಳನ್ನು ನೀಡಿ ಇದನ್ನು ನೋಡಿಯೇ ಮತ ಹಾಕಿ ಎಂದು ಅಭ್ಯರ್ಥಿಗಳ ಬೆಂಬಲಿಗರು ನೀಡುತ್ತಿರುವ ಪ್ರಕರಣವನ್ನು ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್ ಪತ್ತೆ ಹಚ್ಚಿದ್ದಾರೆ.
ಖಾಸಗಿ ವಾಹನಗಳಲ್ಲಿ ಮತದಾರರನ್ನು ಸಾಗಿಸುತ್ತಿದ್ದ ವಾಹನ ಚಾಲಕರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ಘಟನೆ ಕೆಯ್ಯೂರು ಹಾಗೂ ತಿಂಗಳಾಡಿ ಮತ ಕೇಂದ್ರಗಳಲ್ಲಿ ನಡೆದಿದೆ.
ಉಪ್ಪಿನಂಗಡಿ ಗ್ರಾ.ಪಂನ 6 ನೇ ವಾರ್ಡ್ನಲ್ಲಿ 106 ವರ್ಷದ ವೃದ್ಧೆ ಬೊಮ್ಮಿ ಕುಂಟಿನಿ ಮತದಾನ ಮಾಡಿದ್ದಾರೆ. ಉಪ್ಪಿನಂಗಡಿ ಕಸಬಾ ವ್ಯಾಪ್ತಿಯ ಕುಂಟಿನಿ ನಿವಾಸಿ ಬೊಮ್ಮಿ ಅವರು ತನ್ನ ಮೊಮ್ಮಗ ಕೇಶವ ಗೌಡ ಅವರ ಸಹಾಯದಿಂದ ಮತ ಚಲಾಯಿಸಿದರು. ಉಪ್ಪಿನಂಗಡಿಯ 2ನೇ ವಾರ್ಡಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿರುವ ಮಾಧವ ಹೆಗ್ಡೆ ಮತ ಚಲಾಯಿಸಿದರು.