ಪುತ್ತೂರು(ದಕ್ಷಿಣ ಕನ್ನಡ): 2016ರಲ್ಲಿ ಹಾರಾಡಿಯ ಬಾಡಿಗೆ ಮನೆಯಲ್ಲಿದ್ದ ಒಂಟಿ ವೃದ್ಧೆ ವಿನೋದಿನಿ (77) ಯವರನ್ನು ಕೊಲೆಗೈದು ಚಿನ್ನಾಭರಣ ದೋಚಿಕೊಂಡು ಹೋಗಿದ್ದ ಪ್ರಕರಣದ ಅಪರಾಧಿಯಾಗಿರುವ ಕರೋಪಾಡಿಯ ಲಕ್ಷ್ಮಣ ನಾಯ್ಕಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ, ದಂಡ ವಿಧಿಸಿ ಆದೇಶಿಸಿದೆ.
ದುಷ್ಕರ್ಮಿಗಳು ವಿನೋದಿನಿಯವರ ಕೈ, ಕಾಲು, ಮುಖವನ್ನು ಬಟ್ಟೆಯಿಂದ ಕಟ್ಟಿ ಕೊಲೆ ಮಾಡಿ ಅವರ ಕುತ್ತಿಗೆ ಮತ್ತು ಕಿವಿಯಲ್ಲಿದ್ದ ಸುಮಾರು ರೂ.50 ಸಾವಿರ ಮೌಲ್ಯದ 30 ಗ್ರಾಂಗಳಷ್ಟು ತೂಕದ ಚಿನ್ನಾಭರಣವನ್ನು ದೋಚಿಕೊಂಡು ಮೃತದೇಹವನ್ನು ಸ್ಥಳದಲ್ಲಿಯೇ ಬಿಟ್ಟು ಮುಂಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದರು. ಈ ಕುರಿತು ಮೃತರ ಮಗಳು ಮೈತ್ರಿ ನಾಯಕ್ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿನೋದಿನಿಯವರ ಮೃತದೇಹ 2016ರ ಡಿಸೆಂಬರ್ 29 ರಂದು ಹಾರಾಡಿ ಮನೆಯೊಳಗಡೆ ಪತ್ತೆಯಾಗಿತ್ತು.
ಯಾರೋ ಪರಿಚಿತರೇ ಈ ದುಷ್ಕೃತ್ಯ ಎಸಗಿರುವ ಸಾಧ್ಯತೆ ಕುರಿತು ಸಂಶಯ ಹೊಂದಿ ತನಿಖೆ ನಡೆಸಿದ್ದ ಪೊಲೀಸರು ಮೃತ ವಿನೋದಿನಿಯವರ ಮನೆಗೆ ಬಂದು ಹೋಗುತ್ತಿದ್ದ ವ್ಯಕ್ತಿಗಳು ಮತ್ತು ಸಂಬಂಧಿಕರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ಮಾಡಿದ್ದರು. ಈ ವೇಳೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಲಕ್ಷ್ಮಣ ನಾಯಕ್ (32) ಎಂಬಾತ ಡಿ. 23 ರ ಸಂಜೆ ವೇಳೆ ವಿನೋದಿನಿಯವರ ಮನೆಗೆ ಬಂದು ಹೋಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ನಿಟ್ಟಿನಲ್ಲಿ ಲಕ್ಷ್ಮಣ ನಾಯಕ್ ನನ್ನು ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ವಶಪಡೆದು ವಿಚಾರಿಸಿದಾಗ ತಾನೇ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದ. ಆನಂತರ ಕೊಲೆ ಮಾಡಿ ಆಕೆಯಿಂದ ದೋಚಿದ್ದ ಚಿನ್ನ ಮತ್ತು ಕೊಲೆ ಮಾಡಲು ಉಪಯೋಗಿಸಿದ್ದ ಕತ್ತಿಯನ್ನು ಪೊಲೀಸರು ಆತನಿಂದ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು, ಆರೋಪಿ ಲಕ್ಷ್ಮಣ ನಾಯ್ಕ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಅಪರಾಧಿಗೆ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ, ದರೋಡೆ ಅಪರಾಧಕ್ಕಾಗಿ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಲಾಗಿದೆ. ದಂಡದ ಹಣದಲ್ಲಿ ರೂಪಾಯಿ 15 ಸಾವಿರವನ್ನು ಮೃತರ ಪುತ್ರಿ ಮೈತ್ರಿ ನಾಯಕ್ ಅವರಿಗೆ ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ಸರ್ಕಾರಿ ಅಭಿಯೋಜಕರಾಗಿರುವ ಕೃಷ್ಣವೇಣಿ ವಾದಿಸಿದ್ದರು. ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಲಕ್ಷ್ಮಣ ನಾಯ್ಕ ಸಧ್ಯ ಚಿಕ್ಕಮಗಳೂರು ಜೈಲಲ್ಲಿದ್ದಾನೆ.