ಪುತ್ತೂರು: ಜಾತ್ರೆ-ಉತ್ಸವಾದಿಗಳಲ್ಲಿ ಧಾರ್ಮಿಕ ಆಚರಣೆಯ ಜೊತೆಗೆ ವ್ಯಾಪಾರ ವ್ಯವಹಾರಕ್ಕೆ ಮುಕ್ತ ಅವಕಾಶವಿರುತ್ತದೆ. ಆದರೆ ಈ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶವೇ ಇಲ್ಲ. ಇದು ಪುತ್ತೂರಿನ ಬಲ್ನಾಡು ಉಳ್ಳಾಲ್ತಿ ಕ್ಷೇತ್ರದ ಜಾತ್ರೋತ್ಸವ ವಿಶೇಷ. ಇತಿಹಾಸ ಪ್ರಸಿದ್ಧ ಜಾತ್ರೆಯಲ್ಲಿ ಮಲ್ಲಿಗೆ ಹೂವು ಮಾತ್ರ ಮಾರುತ್ತಾರೆ. ಇದಕ್ಕೆ ಮಾತ್ರ ಗ್ರಾಹಕರು ಹಣ ಕೊಟ್ಟು ಕೊಳ್ಳುವ ಪದ್ಧತಿ ಇಲ್ಲಿಯವರೆಗೆ ಬೆಳೆದುಕೊಂಡು ಬಂದಿದೆ.
ಉಳ್ಳಾಲ್ತಿ ದೈವಾರಾಧನೆ ತಮಿಳುನಾಡಿನಿಂದ ಬಂದ ಆಚರಣೆಯ ಕ್ರಮವಾಗಿದೆ. ತುಳುನಾಡಿನಲ್ಲಿ ಒಟ್ಟು ಪ್ರಮುಖವಾದ ಐದು ಉಳ್ಳಾಲ್ತಿ ದೈವಸ್ಥಾನಗಳಿವೆ. ಮಾಣಿ, ಅನಂತಾಡಿ, ಬಲ್ನಾಡು, ಕೆಳಿಂಜ ಮತ್ತು ಕೇಪು ಈ ಐದು ಕ್ಷೇತ್ರಗಳಲ್ಲಿ ಆರಾಧಿಸಲ್ಪಡುವ ಉಳ್ಳಾಲ್ತಿ ದೈವಗಳ ಹಿಂದೆ ಒಂದೊಂದು ಕಥೆಯಿದೆ. ಈ ಕ್ಷೇತ್ರಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡಿನಲ್ಲಿರುವ ಉಳ್ಳಾಲ್ತಿ ಕ್ಷೇತ್ರವೂ ಒಂದಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ನಡೆಯುವ ಆಚರಣೆಗಿಂತ ಇಲ್ಲಿ ಕೊಂಚ ಭಿನ್ನ ಆಚರಣೆಯಿದೆ.
ಪುತ್ತೂರಿನ ಮಹಾಲಿಂಗೇಶ್ವರಜಾತ್ರೆಗೂ ಉಳ್ಳಾಲ್ತಿ ಜಾತ್ರೋತ್ಸವಕ್ಕೂ ನಂಟು: ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಮುಗಿದು, ಧ್ವಜಾರೋಹಣವಾದ ಮರುದಿನವೇ ಬಲ್ನಾಡು ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವಕ್ಕೆ ಗೊನೆಕಡಿಯುವ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ಏಪ್ರಿಲ್ 28ರಂದು ಬಲ್ನಾಡು ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವ ನಡೆಯುವುದು ಇಲ್ಲಿನ ವಾಡಿಕೆ.
ಅಂಗಡಿ ಹಾಕುವಂತಿಲ್ಲ: ಜಾತ್ರೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಆಸುಪಾಸಿನಲ್ಲಿ ವ್ಯಾಪಾರ ಮಳಿಗೆಗಳನ್ನು ಹಾಕುವಂತಿಲ್ಲ. ವ್ಯಾಪಾರ ಎನ್ನುವ ಪದವೂ ಈ ಕ್ಷೇತ್ರದ ಸುತ್ತಮುತ್ತ ಜಾತ್ರೋತ್ಸವದ ಸಂದರ್ಭದಲ್ಲಿ ಕೇಳಿ ಬರುವಂತಿಲ್ಲ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಎಲ್ಲವನ್ನೂ ಉಚಿತವಾಗಿಯೇ ನೀಡಬೇಕಾದ ಕಟ್ಟು-ಕಟ್ಟಲೆ ಹಲವಾರು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ. ಉಳ್ಳಾಲ್ತಿಗೆ ಅತೀ ಪ್ರೀತಿಪಾತ್ರವಾದ ಮಲ್ಲಿಗೆ ಹೂವನ್ನು ಬಿಟ್ಟು ಇಲ್ಲಿ ಎಲ್ಲವೂ ಉಚಿತವಾಗಿ ಸಿಗುತ್ತಿದ್ದು, ಇದು ಈ ಕ್ಷೇತ್ರದ ವಿಶೇಷತೆ!.
ನೇಮೋತ್ಸವವನ್ನು ಮಹಿಳೆಯರು ನೋಡುವಂತಿಲ್ಲ: ಸ್ತ್ರೀ ಪ್ರಧಾನ ದೈವವಾಗಿರುವ ಉಳ್ಳಾಲ್ತಿ ದೈವದ ನೇಮೋತ್ಸವವನ್ನು ಮಹಿಳೆಯರು ನೋಡುವಂತಿಲ್ಲ. ನೇಮೋತ್ಸವ ಆಗುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಆಸುಪಾಸು ಮಹಿಳೆಯರು ಬರುವಂತಿಲ್ಲ ಎನ್ನುವ ಸಂಪ್ರದಾಯವನ್ನೂ ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಉಳ್ಳಾಲ್ತಿ ದೈವಕ್ಕೆ ಇಷ್ಟವಾದ ಮಲ್ಲಿಗೆಯನ್ನು ಮಹಿಳೆಯರು ಪುರುಷರ ಮೂಲಕವೇ ದೈವಕ್ಕೆ ಹರಕೆಯಾಗಿ ಒಪ್ಪಿಸುತ್ತಿದ್ದು, ದೈವಕ್ಕೆ ಹರಕೆಯಾಗಿ ಬರುವ ಸೀರೆಯನ್ನು ಮಹಿಳೆಯರಿಗೇ ನೀಡುವ ಉದಾರತೆಯೂ ಕ್ಷೇತ್ರದಲ್ಲಿದೆ.
ಇದನ್ನೂ ಓದಿ: ಬೆಂಗಳೂರು: ಟಿಟಿಡಿ ದೇವಸ್ಥಾನಕ್ಕೆ ಪುನೀತ್ ಅಭಿಮಾನಿಗಳ ಮುತ್ತಿಗೆ ಯತ್ನ