ಕಡಬ(ದಕ್ಷಿಣ ಕನ್ನಡ): ಪರಶುರಾಮನಿಂದ ಸೃಷ್ಟಿಯಾದ ನಂಬಿಕೆಯ ತುಳುನಾಡು ಹತ್ತು ಹಲವು ಪ್ರಾಚೀನ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳ ತವರು. ಇಂತಹ ವಿಶಿಷ್ಟ ಆಚರಣೆಗಳನ್ನು ಹೊಂದಿರುವ ಈ ನಾಡಿನಲ್ಲಿ ಪುರುಷ ವೇಷ ಧರಿಸಿದ ತಂಡ ಮನೆ ಮನೆಗೆ ತೆರಳಿ ಧಾರ್ಮಿಕ ಜಾಗೃತಿ ಮೂಡಿಸುವ ಪದ್ಧತಿಯೊಂದು ಹಲವು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈ ವಿಶೇಷ ಆಚರಣೆಯ ಮೂಲಕ ಗ್ರಾಮದ ಆರಾಧನಾ ಕೇಂದ್ರಗಳ ಅಭಿವೃದ್ಧಿಗೆ ಧನಸಂಗ್ರಹ ಮಾಡುವ ಬಲು ಅಪರೂಪದ ಪದ್ದತಿಯು ಕಡಬ ತಾಲೂಕಿನ ಆಲಂಕಾರು ಗ್ರಾಮದ ಬುಡೇರಿಯಾ ಬೈಲಿನಲ್ಲಿ ಇಂದಿಗೂ ಜೀವಂತವಾಗಿದೆ.
ಸುಮಾರು ಎಂಬತ್ತರ ದಶಕದಲ್ಲಿ ಈ ಭಾಗದ ಹಿರಿಯರು ಗ್ರಾಮದ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಸಂಕಲ್ಪ ತೊಟ್ಟಿದ್ದರು. ದೈವಸ್ಥಾನದ ಅಭಿವೃದ್ಧಿಗೆ ಧನಸಂಗ್ರಹದ ಮೂಲಕ್ಕಾಗಿ ಹುಡುಕಾಟ ನಡೆಸಿದಾಗ ಪುರುಷ ವೇಷ ಧರಿಸಿದ ತಂಡ ಮನೆ ಮನೆಗೆ ತೆರಳಿ ಧನ ಸಂಗ್ರಹಿಸುವ ಆಲೋಚನೆ ಹಿರಿಯರಲ್ಲಿ ಮೂಡಿದೆ. ಈ ಮೂಲಕ ಆರಂಭಿಸಲಾದ ಪದ್ದತಿ ಇಂದಿಗೂ ಮುಂದುವರೆಯುತ್ತಿದ್ದು, ಊರಿನ ಯುವಕರು ಉತ್ಸಾಹದಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.
ವಿವಿಧ ರೀತಿಯ ವೇಷ ಧರಿಸಿದ ಸುಮಾರು 8 ಜನರಿರುವ ತಂಡ ಮನೆ ಮನೆಗೆ ತೆರಳಿ ತನ್ನ ವೇಷ, ಪಾತ್ರಕ್ಕೆ ತಕ್ಕಂತೆ ನರ್ತಿಸುತ್ತಾರೆ. ಈ ತಂಡದಲ್ಲಿ ದೇವರ ಮೂರ್ತಿ ಹೊರುವವ, ದೈವದ ಪರಿಚಾರಕ, ಅರ್ಚಕ, ಮುಸ್ಲಿಂ, ಸ್ತ್ರೀ ವೇಷಧಾರಿ, ಇಬ್ಬರು ಬೈದರ್ ವೇಷಧಾರಿಗಳು, ಅರ್ಚಕರ ಸಹಾಯಕ.. ಹೀಗೆ ಎಂಟು ಜನರ ತಂಡ ಪ್ರಮುಖವಾಗಿರುತ್ತದೆ. ತಂಡದೊಂದಿಗೆ ಇನ್ನಿತರ ಪೋಷಕ ವೇಷಧಾರಿಗಳೂ ಇರುತ್ತಾರೆ. ಊರಿನ ಭಾಗದಲ್ಲಿ ರಾತ್ರಿ ವೇಳೆ ಚೆಂಡೆ, ವಾಳಗದ ಸದ್ದಿನೊಂದಿಗೆ ಈ ತಂಡ ತಿರುಗಾಟ ನಡೆಸುತ್ತದೆ.
ಮನೆ ಮನೆಗಳಿಗೆ ತೆರಳುವ ವೇಷಧಾರಿಗಳ ತಂಡವು ಹತ್ತು ನಿಮಿಷಗಳ ಕಾಲ ಮನೆಯಂಗಳದಲ್ಲಿ ತಮ್ಮ ವೇಷಕ್ಕೆ ತಕ್ಕಂತೆ ನರ್ತಿಸುವರು. ಆ ಬಳಿಕ ಇವರ ನರ್ತನಕ್ಕೆ ಪ್ರತಿಯಾಗಿ ಒಂದು ಹಣದ ಮೊತ್ತವನ್ನು ನೀಡುತ್ತಾರೆ. ಈ ಮೊತ್ತವನ್ನು ಸಂಗ್ರಹಿಸಿ ಗ್ರಾಮದ ದೈವಸ್ಥಾನಕ್ಕೆ ನೀಡಲಾಗುತ್ತದೆ. ಪ್ರತಿ ವೇಷಧಾರಿಯು ತಿರುಗಾಟ ಮುಗಿಸುವವರೆಗೆ ಶುದ್ಧಾಚಾರ ಪಾಲಿಸಲೇಬೇಕು. ಪ್ರತಿದಿನ ಒಂದು ಮನೆಯಲ್ಲಿ ವೇಷ ಧರಿಸಿ ತಿರುಗಾಟ ಆರಂಭಿಸಿದ ಬಳಿಕ ಆ ಊರಿನ ಕಾಸರಕ್ಕ ಜಾತಿಗೆ ಸೇರಿದ ಮರದ ಕೆಳಗೆ ವೇಷವನ್ನು ವಿಸರ್ಜಿಸುವುದು ವಾಡಿಕೆ. ವೇಷ ಧರಿಸಿದ ವ್ಯಕ್ತಿಗೆ ಅಡ್ಡ ಹೆಸರಿಟ್ಟು ಕರೆಯಲಾಗುತ್ತದೆ. ಈ ಹೆಸರನ್ನು ತಿರುಗಾಟ ಮುಗಿದ ಬಳಿಕ ಬಳಕೆ ಮಾಡುವಂತಿಲ್ಲ ಎಂಬುದು ನಂಬಿಕೆ.
ತಿರುಗಾಟದ ಕೊನೆ ದಿನ ನಿಗದಿಪಡಿಸಿದ ಮನೆಯೊಂದರಲ್ಲಿ ಪೂಜೆ ಕೈಂಕರ್ಯಗಳು ನಡೆಯುತ್ತದೆ. ಈ ವೇಳೆ ಪ್ರತಿ ವೇಷಧಾರಿಯು ಮಂಗಳೂರಿನ ಕದ್ರಿ ದೇವಸ್ಥಾನದಿಂದ ತರಲಾಗುವ ತೀರ್ಥ ಪ್ರಸಾದವನ್ನು ಸೇವಿಸಿ ವೇಷ ವಿಸರ್ಜಿಲಾಗುತ್ತಾರೆ. ಈ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ವೇಷಧಾರಿ ಫಲಾಪೇಕ್ಷೆಯಿಲ್ಲದೆ ಭಾಗಿಯಾಗಬೇಕು. ಕೊನೆಯಲ್ಲಿ ಪೂಜೆ ಮುಗಿದ ಬಳಿಕ ಪ್ರತಿ ವೇಷಧಾರಿಗೆ ತಾನು ಭಾಗವಹಿಸಿದ ದಿನ ಲೆಕ್ಕಚಾರದಲ್ಲಿ ಒಂದು ದಿನಕ್ಕೆ ಒಂದು ಕೆಜಿ ಅವಲಕ್ಕಿಯಂತೆ ನೀಡಲಾಗುತ್ತದೆ. ಇದುವೇ ಸಂಬಳ ಎಂದು ಪರಿಗಣಿಸಲಾಗುತ್ತದೆ. ಬುಡೇರಿಯಾ ಬೈಲಿನ ಸುಮಾರು 150 ಮನೆಗಳಿಗೆ ಪ್ರತಿ ವರ್ಷ ಈ ವೇಷಧಾರಿಗಳು ತಿರುಗಾಟ ನಡೆಸುತ್ತಾರೆ. ಹಿರಿಯರ ಮಾಗದರ್ಶನದಲ್ಲಿ ಯುವ ಸಮೂಹ ಈ ವೇಷದ ತಂಡದಲ್ಲಿ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಾರೆ.
ಅಲಂಕಾರು ಬುಡೇರಿಯಾ ಭಾಗದಲ್ಲಿ ಎಂಬತ್ತರ ದಶಕದಲ್ಲಿ ಪುರುಷ ವೇಷ ಎಂಬ ಧಾರ್ಮಿಕ ಆಚರಣೆಯನ್ನು ಆರಂಭಿಸಲಾಯಿತು. ಈ ಹಿಂದೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಧನ ಸಂಗ್ರಹಕ್ಕಾಗಿ ಈ ಕಾರ್ಯ ಮಾಡಲಾಗಿತ್ತು ಎಂದು ಹೇಳಲಾಗುತ್ತದೆ. ಅಂತೆಯೇ ಇಲ್ಲಿನ ಹಿರಿಯರ ಆಲೋಚನೆಯಂತೆ ಇಂದು ಈ ಪದ್ಧತಿಯನ್ನು ಇಲ್ಲಿ ಪಾಲಿಸಿ ಯಶಸ್ವಿಯಾಗಿದ್ದಾರೆ. ಈ ರೀತಿಯ ಪದ್ದತಿಯು ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಬಿಟ್ಟರೆ ಬುಡೇರಿಯಾದಲ್ಲಿ ಮಾತ್ರ ಕಾಣ ಸಿಗುವುದು ಎಂದು ಹೇಳಲಾಗುತ್ತದೆ. ದೈವಿ ಕಾರ್ಯವಾದ ಕಾರಣ ಇದಕ್ಕೆ ಅಪಚಾರವೆಸಗುವಂತಿಲ್ಲ.
ಈ ತಿರುಗಾಟದ ಬಗ್ಗೆ ಕೀಳುಪದ ಬಳಕೆ ಮಾಡಿದ ಕೆಲವು ಮಂದಿಗೆ ಕೆಟ್ಟ ಪರಿಣಾಮ ಸಿಕ್ಕಿದ ಅನೇಕ ಉದಾಹರಣೆಗಳಿವೆ. ಊರಿನ ದುಷ್ಟ ಶಕ್ತಿ ದೂರವಾಗುವುದರೊಂದಿಗೆ ದೈವಿ ಶಕ್ತಿ ನೆಲೆಗೊಳ್ಳುತ್ತದೆ ಎಂಬ ನಂಬಿಕೆಯೂ ಈ ಕಾರ್ಯದ ಹಿಂದೆ ಅಡಗಿದೆ ಎಂದು ಹಿರಿಯರಾದ ಪಜ್ಜಡ್ಕ ಈಶ್ವರ ಗೌಡ ಹೇಳುತ್ತಾರೆ.
ಇದನ್ನೂ ಓದಿ:ದಾವಣಗೆರೆ: ಅಗಲಿದ ಪ್ರೀತಿಯ ಮಾಲೀಕನ ನೆನೆದು ಮರುಗುತ್ತಿರುವ 'ಡಯಾನ'