ಪುತ್ತೂರು(ದಕ್ಷಿಣ ಕನ್ನಡ): ಲಾಕ್ಡೌನ್ ಹಿನ್ನೆಲೆ ಬೀಡಿ ಕಾರ್ಮಿಕರಿಗೆದುರಾಗಿರುವ ನಷ್ಟ ಭರಿಸಲು ಕ್ರಮ ಕೈಗೊಳ್ಳಲಾಗಿದೆ. ಬೀಡಿ ಕಾರ್ಮಿಕರು ತಯಾರಿಸಿದ ಬೀಡಿಗಳಲ್ಲಿ ಶೇ. 50ರಷ್ಟನ್ನು ತೆಗೆದುಕೊಳ್ಳುವುದರೊಂದಿಗೆ ಅವರಿಗೆ ಬೋನಸ್‌ಗಳನ್ನು ನೀಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಭಾನುವಾರ ತಾಲೂಕಿನ ಎಪಿಎಂಸಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೀಡಿ ಕಾರ್ಮಿಕರ ವಿಚಾರವನ್ನು ಪ್ರಸ್ತಾಪಿಸಿದರು. ಈಗಾಗಲೇ ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ವಿತರಿಸುವ ರೇಷನ್‌ನಲ್ಲಿ ಹೆಚ್ಚಳ ಮಾಡಲಾಗಿದ್ದು, ಅಕ್ಕಿ ಜೊತೆಗೆ ಗೋಧಿ, ಬೇಳೆಗಳನ್ನು ಸರಿಯಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅಷ್ಟೇಅಲ್ಲದೇ, ಎಪಿಎಲ್, ಬಿಪಿಎಲ್ ಇಲ್ಲದವರಿಗೂ ರೇಷನ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಕರ್ತರು, ನಿರ್ಗತಿಕರು, ಇನ್ನಿತರ ಕಾರ್ಮಿಕ ವರ್ಗದವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಶಾಸಕರು ಸೇರಿದಂತೆ ಸಂಸದರು ಶ್ರಮಿಸುತ್ತಿದ್ದಾರೆ.