ಮಂಗಳೂರು: ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪ್ರಮುಖವಾಗಿ ಪಂಜಾಬ್ ರೈತರು ಪಾಲ್ಗೊಂಡಿದ್ದಾರೆ. ಇವರ ಚಳವಳಿಗೆ ಪೂರಕವಾಗಿ ಕೃಷಿ ಕಾಯ್ದೆ ವಿರುದ್ಧ ಜಾಗೃತಿ ಮೂಡಿಸುವ 14 ಸಾವಿರ ಕಿಲೋಮೀಟರ್ ದೇಶಯಾತ್ರೆಯಲ್ಲಿ ತೊಡಗಿಸಿಕೊಂಡ ಇಬ್ಬರು ಪಂಜಾಬಿ ರೈತರು ಮಂಗಳೂರಿಗೆ ಆಗಮಿಸಿದ್ದಾರೆ.
ಪಂಜಾಬಿನಿಂದ ಜ.5 ರಂದು ಹೊರಟ ಇವರು ಹರಿಯಾಣ, ದೆಹಲಿ, ಉತ್ತರಪ್ರದೇಶ, ಬಿಹಾರ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ, ಸಿಕ್ಕಿಂ, ಜಾರ್ಖಂಡ್, ಪಶ್ಚಿಮ ಬಂಗಾಲ, ಒಡಿಶಾ, ಛತ್ತೀಸ್ಗಢ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳಕ್ಕೆ ಪ್ರಯಾಣಿಸಿದ್ದು ಮಂಗಳವಾರ ರಾತ್ರಿ ಮಂಗಳೂರಿಗೆ ತಲುಪಿದ್ದಾರೆ. ಇಂದು ಉಡುಪಿ ಕಡೆ ಪ್ರಯಾಣ ಬೆಳೆಸಿದ್ದು ಕೃಷಿ ಪ್ರದೇಶಗಳಲ್ಲಿ ರೈತರಿಗೆ ಕೃಷಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಇನ್ನೂ ತಮ್ಮ ಯಾತ್ರೆಗೆ ಬಳಸುತ್ತಿರುವ ಸ್ಕಾರ್ಪಿಯೋ ವಾಹನದಲ್ಲಿ ಮಲಗುವ, ಅಡುಗೆ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಿಂಬದಿಯ ಎರಡು ಸೀಟುಗಳನ್ನು ತೆಗೆದು ಇಬ್ಬರು ಹಾಸಿಗೆ ಹರಡಿ ಮಲಗುವಂತೆ ವಾಹನ ವಿನ್ಯಾಸ ಮಾಡಲಾಗಿದ್ದು, ಅದರಲ್ಲಿಯೆ ಗ್ಯಾಸ್ ಸ್ಟೌ, ಆಹಾರ ವಸ್ತು, ರಾತ್ರಿ ಹೊರಗೆ ಮಲಗಲು ಟೆಂಟ್ ವ್ಯವಸ್ಥೆ ಇದೆ. ವಾಹನದಲ್ಲಿ ಕೃಷಿ ಕಾಯ್ದೆ ವಿರೋಧಿ ಬರಹಗಳನ್ನು ಹಾಕಲಾಗಿದೆ.