ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಸೂರತ್ಕಲ್ ಎನ್ಐಟಿಕೆ ಬಳಿಯ ಟೋಲ್ ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸುವುದಾಗಿ ಅಗರ್ವಾಲ್ ಕಂಪನಿ ಜು. 14ರಂದು ಆದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿ ಕಾಂಗ್ರೆಸ್, ಡಿವೈಎಫ್ ಹಾಗೂ ಸ್ಥಳೀಯ ನಾಗರಿಕ ಸಮಿತಿಗಳು ಮಂಗಳವಾರ ಪ್ರತಿಭಟನೆಗೆ ಮುಂದಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಮೂರು ದಿನಗಳ ಕಾಲ ತಾತ್ಕಾಲಿಕ ಟೋಲ್ ತಡೆಗೆ ಆದೇಶ ನೀಡಿದ್ದಾರೆ.
ಜಿಲ್ಲೆಯ ಟೋಲ್ ಗೇಟ್ ರಸ್ತೆಗೆ ಸ್ಥಳೀಯ ವಾಹನಗಳನ್ನು ಉಚಿತವಾಗಿ ಬಿಡಬೇಕು. ಟೋಲ್ ವಿಧಿಸಬಾರದು ಎಂದು ವಿವಿಧ ಪಕ್ಷಗಳು ಹಾಗೂ ಸ್ಥಳೀಯರು ಪ್ರತಿಭಟಿಸಿ ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಮೂರು ದಿನಗಳ ಕಾಲ ತಾತ್ಕಾಲಿಕ ತಡೆಗೆ ಆದೇಶ ನೀಡಿದ್ದಾರೆ.
ಇಂದಿನಿಂದ ರಾಷ್ಟ್ರೀಯ ಹೆದ್ದಾರಿ ಸುರತ್ಕಲ್ ಎನ್ಐಟಿಕೆ ಬಳಿಯ ಟೋಲ್ ಗೇಟ್ನಲ್ಲಿ ಸ್ಥಳೀಯ ವಾಹನ(KA 19)ಗಳಿಗೂ ಟೋಲ್ ವಿಧಿಸಲಾಗುತ್ತದೆ ಎಂದು ಅಗರ್ವಾಲ್ ಕಂಪನಿ ಘೋಷಣೆ ಮಾಡಿತ್ತು. ಆದರೆ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಇಂದಿನಿಂದ ಮೂರು ದಿನಗಳ ಕಾಲ ಟೋಲ್ ವಸೂಲಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.
ಆದರೂ ಕಾಂಗ್ರೆಸ್, ಡಿವೈಎಫ್ಐ ಹಾಗೂ ಬಿಜೆಪಿ ಸೇರಿದಂತೆ ಸ್ಥಳೀಯ ಟೋಲ್ ವಿರೋಧಿ ಹೋರಾಟ ಸಮಿತಿ ಇಂದು ಟೋಲ್ ಬಳಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದವು. ಆದರೆ ಅಗರ್ವಾಲ್ ಕಂಪನಿ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸದ ಹಿನ್ನೆಲೆಯಲ್ಲಿ ಬೆಳಗ್ಗೆ 7.30 ಗಂಟೆಯಿಂದಲೇ ಎಲ್ಲಾ ಪಕ್ಷಗಳ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರೇ ಹೊರತು ಪ್ರತಿಭಟನೆ ನಡೆಯಲಿಲ್ಲ
ಈ ಸಂದರ್ಭ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಈ ಟೋಲ್ ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಿ ಮಾಡಬಾರದೆಂದು ಈ ಹಿಂದೆಯೂ ನಾಗರಿಕ ಹೋರಾಟ ಸಮಿತಿ ಹೋರಾಟ ನಡೆಸಿತ್ತು. ಈ ಚತುಷ್ಪಥ ಟೋಲ್ ಗೇಟ್ನಲ್ಲಿ ಮೂಲಭೂತ ಸೌಕರ್ಯಗಳೂ ಇಲ್ಲ. ಲೋಕಸಭಾ ಚುನಾವಣೆಗಿಂತ ಮೊದಲಿಗೆ ದ.ಕ. ಜಿಲ್ಲೆಯ ಈಗಿನ ಸಂಸದರು ಹಾಗೂ ಶಾಸಕರು ರಾಜಕೀಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಾವು ಇಲ್ಲಿ ಟೋಲ್ ವಿಧಿಸಲು ಬಿಡುವುದಿಲ್ಲ. ಟೋಲ್ ಗೇಟನ್ನೂ ಇಲ್ಲಿಂದ ಕಿತ್ತು ಬಿಸಾಡುತ್ತೇವೆ ಎಂಬ ಮಾತನ್ನು ಹೇಳಿದ್ದರು.
ಆದರೆ ಚುನಾವಣೆ ಮುಗಿದು ಇಷ್ಟು ಕಾಲವಾದರೂ ಸಂಸದರು ದಬ್ಬಾಳಿಕೆ ಮಾಡುವ ಮೂಲಕ ಜು. 14ರಿಂದ ಸ್ಥಳೀಯ ವಾಹನಗಳಿಗೆ ಟೋಲ್ ವಸೂಲಿ ಮಾಡಲು ಅನುಮತಿ ನೀಡಿದ್ದಾರೆ. ಅಲ್ಲದೆ ಜಿಲ್ಲಾಡಳಿತಕ್ಕೆ ಟೋಲ್ ವಸೂಲಿ ತಂಡಕ್ಕೆ ಸಂಪೂರ್ಣ ಭದ್ರತೆ ನೀಡುವ ಆದೇಶ ನೀಡಿದ್ದಾರೆ ಎಂದು ದೂರಿದರು.