ಉಳ್ಳಾಲ: ಮೀನುಗಾರಿಕೆಗೆಂದು ತೆರಳಿದವರು ದೋಣಿ ಕೆಟ್ಟು ಹದಿನಾರು ಗಂಟೆ ಕಾಲ ಸಮುದ್ರದ ಮಧ್ಯೆ ಸಿಲುಕಿದ್ದ ಮೂವರನ್ನು ಇಂದು ಬೆಳಿಗ್ಗೆ ಬಂಗ್ರಮಂಜೇಶ್ವರದ ಬೆಸ್ತರು ತೆರಳಿ ರಕ್ಷಣೆ ಮಾಡಿದ್ದಾರೆ.
ಉಳ್ಳಾಲದ ಆಸೀಫ್ ಎಂಬುವರ ಮಾಲೀಕತ್ವದಲ್ಲಿರುವ ಅಯನ್ ಎಂಬ ದೋಣಿಯಲ್ಲಿ ಉಳ್ಳಾಲ ಸಮುದ್ರ ತೀರದಿಂದ ನಿನ್ನೆ ಬೆಳಿಗ್ಗೆ 6 ಗಂಟೆಗೆ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ನಡುವೆ ಸಮುದ್ರದ ಮಧ್ಯೆ ದೋಣಿಯ ಎಂಜಿನ್ ಕೆಟ್ಟು ಹೋಗಿ ಅವರು ಅಲ್ಲಿಯೇ ಸಿಲುಕಿಕೊಂಡಿದ್ದು, ಇವರೊಡನೆ ಸಂಪರ್ಕ ಸಾಧಿಸಲಾಗಿರಲಿಲ್ಲ.
ದೋಣಿಯಲ್ಲಿದ್ದವರು ಉಳ್ಳಾಲದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಮೀನುಗಾರರನ್ನ ತಮಿಳುನಾಡು ರಾಮೇಶ್ವರಂ ಮೂಲದ ಬಾಲ, ನಾಗರಾಜ, ಸುಕುಮಾರ ಎಂದು ಗುರುತಿಸಲಾಗಿದೆ. ಇವರು ದೋಣಿಯಲ್ಲಿ ತೆಗೆದುಕೊಂಡು ಹೋಗಿದ್ದ ಆಹಾರ, ನೀರನ್ನು ಸೇವಿಸಿ ರಾತ್ರಿ ಕಳೆದಿದ್ದರು.
ಈ ವಿಷಯ ಇಂದು ಬೆಳಿಗ್ಗೆ ಬಂಗ್ರಮಂಜೇಶ್ವರದ ಕೆಎಂಕೆ ರಶೀದ್ ಎಂಬುವರಿಗೆ ತಿಳಿದು, ಅವರು ಕಣ್ವತೀರ್ಥ ನಿವಾಸಿ ಧನರಾಜ್, ಹೊಸಬೆಟ್ಟು ಕಡಪ್ಪರ ನಿವಾಸಿಗಳಾದ ಮುಸ್ತಫಾ ಮಂಜೇಶ್ವರ, ಹನೀಫ್ ಬಂಗ್ರಮಂಜೇಶ್ವರ, ಮೊಹಮ್ಮದ್, ರಸಾಕ್ ಎಂಬವರೊಂದಿಗೆ ತೆರಳಿ ಸಮುದ್ರದ ಮಧ್ಯೆ ಸಿಲುಕಿದವರನ್ನು ರಕ್ಷಿಸಿ ದೋಣಿ ಸಮೇತ ಕರೆದುಕೊಂಡು ಬಂದಿದ್ದಾರೆ.
ಬಂಗ್ರಮಂಜೇಶ್ವರ ಸಮುದ್ರ ತೀರಕ್ಕೆ ಆಗಮಿಸಿದ ಮೂವರು ಸುರಕ್ಷಿತವಾಗಿದ್ದು, ಈ ಮೂವರನ್ನ ರಕ್ಷಿಸಿದ ಬಂಗ್ರಮಂಜೇಶ್ವರದ ಬೆಸ್ತರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.