ಮಂಗಳೂರು: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಮೆರಿಟೈಮ್ ಬೋರ್ಡ್ ರಚಚಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಅದಕ್ಕೆ ಎರಡು ತಿಂಗಳೊಳಗೆ ಅಂತಿಮ ರೂಪ ನೀಡುತ್ತಾರೆ. ಕೇಂದ್ರ ಸರ್ಕಾರದ ನೆರವವನ್ನು ಪಡೆದು 320 ಕಿ.ಮೀ. ಉದ್ದದ ಸಮುದ್ರ ಕಿನಾರೆಯಲ್ಲಿರುವ ಬಂದರನ್ನು ಖಾಸಗಿಯವರ ಒಡಂಬಡಿಕೆಯೊಂದಿಗೆ ನಾಲ್ಕೈದು ವರ್ಷಗಳೊಳಗೆ ಉನ್ನತೀಕರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ರು.
ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಪೂಜಾರಿ ಅವರ ಕಚೇರಿಯಲ್ಲಿ ನಡೆದ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಮಂಗಳೂರು ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ, ಅಭಿವೃದ್ಧಿಯಾಗಬೇಕಾದ, ಹೂಳೆತ್ತಬೇಕಾದ ಬಂದರುಗಳನ್ನು ಪ್ರಾಶಸ್ತ್ಯದ ಆಧಾರದಲ್ಲಿ ಪಟ್ಟಿ ಮಾಡಿಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದ್ರು.
ನಮ್ಮ ಮೀನುಗಾರಿಕಾ, ಬಂದರು ಮಂಡಳಿಯ ತಂಡವೊಂದು ಗುಜರಾತ್, ಕೇರಳ ಬಂದರುಗಳ ಅಧ್ಯಯನ ಪ್ರವಾಸ ಮಾಡಲಾಗುವುದು. ಇದರ ಮೂಲಕ ಅವರ ಅಭಿವೃದ್ಧಿಯನ್ನು ಅನುಸರಿಸಿ ಕರ್ನಾಟಕದಲ್ಲಿ ಅವುಗಳನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಬಹುದು ಎಂದು ಯೋಚಿಸಲಾಗುವುದು ಎಂದರು.
ಇನ್ನು, ದೇವಾಲಯಗಳ ಶುಚಿತ್ವಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ, ದೇವಸ್ಥಾನಗಳ ಹೊಸ ಸಿಬ್ಬಂದಿಯ ನೇಮಕ ಮಾಡಲು ಯಾವೆಲ್ಲಾ ಕಾರ್ಯ ಕೈಗೊಳ್ಳಬೇಕೋ ಅದನ್ನು ಅನುಷ್ಠಾನ ಮಾಡಲಾಗುತ್ತದೆ. ಈಗಾಗಲೇ ದೇವಸ್ಥಾನದ ಅಭಿವೃದ್ಧಿ ಸಮಿತಿಯು ಕೋಟಿಗಟ್ಟಲೇ ಹಣ ಖರ್ಚು ಮಾಡಿ ದೇವಸ್ಥಾನಗಳನ್ನು ಸುಸ್ಥಿತಿಯಲ್ಲಿಟ್ಟಿದ್ದಾರೆ. ಕೆಲವು ದೇವಸ್ಥಾನಗಳು ಇನ್ನೂ ಅಭಿವೃದ್ಧಿ ಆಗಬೇಕಿದೆ. ಆರಾಧನಾ ಸ್ಕೀಮ್ ನಲ್ಲಿ ಜಾರಿಯಾಗಿರುವ ಹಣವನ್ನು ತಕ್ಷಣ ಖರ್ಚು ಮಾಡಲು ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡುತ್ತೇನೆ ಎಂದು ಸಚಿವ ಪೂಜಾರಿ ತಿಳಿಸಿದರು.
ಈ ಸಂದರ್ಭ ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್ ಉಪಸ್ಥಿತರಿದ್ದರು.