ಮಂಗಳೂರು: ಜಿಲ್ಲೆಯಲ್ಲಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಿ ಸಾರ್ವಜನಿಕರು ಸುರಕ್ಷಿತವಾಗಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳನ್ನು ವಿಳಂಬ ಮಾಡದೇ ಆದ್ಯತೆಯ ಮೇಲೆ ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕೈಗೊಳ್ಳಬೇಕು ಎಂದರು. ಅಡ್ಡಹೊಳೆಯಿಂದ -ಬಂಟ್ವಾಳದವರೆಗಿನ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿಸಲು 17 ಗ್ರಾಮಗಳ ಒಳಗೊಂಡಂತೆ 35 ಹೆಕ್ಟೇರ್ ಜಮೀನನ್ನು 680 ಮಂದಿ ಖಾತೆದಾರರಿಂದ ಭೂ-ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಮಾಲೀಕರಿಗೆ ಭೂಸ್ವಾಧೀನದ ಪ್ರಕ್ರಿಯೆಯಂತೆ 3ಜಿ ಅವಾರ್ಡ್‍ಗಳನ್ನು 10 ದಿನದ ಒಳಗೆ ಸಹಾಯಕ ಆಯುಕ್ತರು ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಮಾಣಿಯಿಂದ ಬಿ.ಸಿ ರೋಡ್ ಜಂಕ್ಷನ್‍ವರೆಗಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳನ್ನು ನವೆಂಬರ್ 30 ರೊಳಗೆ ಪೂರ್ಣಗೊಳಿಸಬೇಕೆಂದು ಎನ್.ಹೆಚ್.ಎ.ಐ ಯೋಜನಾ ನಿರ್ದೇಶಕರಿಗೆ ಅವರು ಸೂಚಿಸಿದರು. ಗುಂಡ್ಯ-ಅಡ್ಡಹೊಳೆ ರಸ್ತೆಗಳ ಗುಂಡಿಗಳನ್ನು ಸಹ ಮುಚ್ಚುವ ಕಾರ್ಯ ಕೈಗೊಳ್ಳಬೇಕೆಂದು ತಿಳಿಸಿದರು.
ರಸ್ತೆ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಎಂ.ಆರ್.ಪಿ.ಎಲ್ ಸಂಸ್ಥೆಯ ಸಹಕಾರದೊಂದಿಗೆ ಪೂರೈಕೆ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಮಾಣಿ ಮತ್ತು ಬಿ.ಸಿ. ರೋಡ್ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪೊಲೀಸ್ ಅಧೀಕ್ಷಕ, ಎನ್.ಹೆಚ್.ಎ.ಐ ನ ಯೋಜನಾ ನಿರ್ದೇಶಕರು, ವಿಶೇಷ ಭೂ-ಸ್ವಾಧೀನ ಅಧಿಕಾರಿಗಳು, ಪುತ್ತೂರು ಉಪ ವಿಭಾಗದ ವಿಭಾಗಾಧಿಕಾರಿ ಹಾಗೂ ಎನ್.ಹೆಚ್.ಎ.ಐ ನ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.