ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಮೂಲಕ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್, ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರಿಗೆ ಅಪಮಾನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಸುರತ್ಕಲ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ "ಪೋಸ್ಟ್ ಕಾರ್ಡ್ ಅಭಿಯಾನ"ದ ಸಹಿ ಸಂಗ್ರಹ ಚಳವಳಿ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದು ಮಹಾತ್ಮ ಗಾಂಧೀಜಿ ಕನಸಾಗಿತ್ತು. ಬಾಂಗ್ಲಾ ವಲಸಿಗರಿಗೆ ಪೌರತ್ವ ಕೊಡುವುದು ಇಂದಿರಾ ಗಾಂಧಿ ಕನಸಾಗಿತ್ತು. ಪೌರತ್ವ ಕೊಡುವಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಸಂಸತ್ತಿನಲ್ಲಿ ಧ್ವನಿಯೆತ್ತಿದ್ದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿಶ್ ಶಾ 3 ಕೋಟಿ ಜನರಿಗೆ ಪೌರತ್ವ ನೀಡುವ ಕಾರ್ಯ ಮಾಡಿರುವುದು ಅಭಿನಂದನೀಯ. ಆದರೆ ಕಾಂಗ್ರೆಸ್ ರಾಜಕಾರಣಕ್ಕಾಗಿ ಸುಳ್ಳು ಅಪಪ್ರಚಾರ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದೆ. ಮತೀಯವಾದ ಬೆಂಕಿ ಹಬ್ಬಿಸುತ್ತಾ ದೇಶಕ್ಕೆ ಬೆಂಕಿ ಇಡಲು ಯತ್ನಿಸುತ್ತಿದೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ರಂತಹ ಹಿರಿಯರಿಗೆ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಎಂದು ಆಪಾದಿಸಿದರು.
ಈ ವೇಳೆ ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸುರತ್ಕಲ್ನ ಸಹಿ ಸಂಗ್ರಹ ಅಭಿಯಾನದಲ್ಲಿ ಸಹಿ ಹಾಕಿ ಉಡುಪಿಗೆ ತೆರಳಿದರು.