ಮಂಗಳೂರು: ಆಯುಷ್ಮಾನ್ ಭಾರತ ಯೋಜನೆ ಅಳವಡಿಸಿದ್ದರೂ, ಖಾಸಗಿ ಆಸ್ಪತ್ರೆಗಳು ಪ್ಯಾಕೇಜ್ ಮೊತ್ತಕ್ಕಿಂತ ಹೆಚ್ಚುವರಿ ಹಣ ಪಡೆಯುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನಿನ್ನೆ 12 ಪ್ರಕರಣಗಳ ಹಣ ವಾಪಸ್ ನೀಡಲಾಗಿದೆ ಎಂದು ಡಿಎಚ್ಒ ಡಾ.ರಾಮಚಂದ್ರ ಬಾಯಿರಿ ಹೇಳಿದರು.
ದ.ಕ. ಜಿ ಪಂನ ನೇತ್ರಾವತಿ ಸಭಾಂಗಣದಲ್ಲಿ 22ನೇ ಸಾಮಾನ್ಯ ಸಭೆಯಲ್ಲಿ ಆಯುಷ್ಮಾನ್ ಭಾರತ ಯೋಜನೆ ಇದ್ದರೂ, ಜನರಿಂದ ಖಾಸಗಿ ಆಸ್ಪತ್ರೆಗಳು ಹಣ ಲೂಟಿ ಮಾಡುವ ಬಗ್ಗೆ ದೂರುಗಳು ಕೇಳಿ ಬಂತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿಎಚ್ಒ ಅವರು, ಈಗಾಗಲೇ ಈ ವಿಚಾರಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ಸಭೆ ನಡೆಸಿ ನಿನ್ನೆ 12 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೋಗಿಗಳಿಂದ ಪಡೆದ ಹೆಚ್ಚುವರಿ ಹಣವನ್ನು ಹಿಂದೆ ಕೊಡಲಾಗಿದೆ. ಮುಂದೆಯೂ ಇಂತಹ ಪ್ರಕರಣಗಳ ಬಗ್ಗೆ ದೂರು ನೀಡಿದಲ್ಲಿ ಖಂಡಿತಾ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
45 ವಯಸ್ಸು ದಾಟಿದ ಎಲ್ಲರಿಗೂ ಉಚಿತವಾಗಿ ಸರಕಾರ ಕೋವಿಡ್ ಲಸಿಕೆ ನೀಡುತ್ತಿದ್ದು, ನಮ್ಮ ಜಿಲ್ಲೆಯಲ್ಲಿ 66 ಪ್ರಾಥಮಿಕ ಆರೋಗ್ಯ ಕೇಂದ್ರ, 12 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 6 ಸಮುದಾಯ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆ ಹಾಗೂ ಒಂದು ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ. ಇದೀಗ ವಾರದಲ್ಲಿ ಒಂದೆರಡು ದಿನಗಳಲ್ಲಿ ಸರಕಾರಿ ಉಪಕೇಂದ್ರಗಳಲ್ಲಿಯೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೇ ಜಿಲ್ಲೆಯ 30 ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ 250 ರೂ. ಹಣ ಭರಿಸಬೇಕಾಗುತ್ತದೆ ಎಂದು ಹೇಳಿದರು.
ಕೋವಿಡ್ ಲಸಿಕೆಯ ಬಗ್ಗೆ ಋಣಾತ್ಮಕ ಅಂಶಗಳನ್ನು ಹರಡಲಾಗುತ್ತಿದೆ. ಯಾವುದೇ ಸುಳ್ಳು ಸುಳ್ಳು ವದಂತಿಗಳಿಗೆ ಕಿವಿಗೊಡದೇ 45 ವಯಸ್ಸು ದಾಟಿದ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ಯಾರಿಗಾದರೂ ಜ್ವರ ಬಂದಲ್ಲಿ ಪ್ಯಾರಾಸಿಟಮಲ್ ಮಾತ್ರೆ ಪಡೆದುಕೊಳ್ಳಬಹುದು. ಬೇರೆ ಇನ್ನಿತರ ಯಾವುದೇ ರೀತಿಯ ಮಾತ್ರೆಗಳು ಸೇವಿಸುವ ಅಗತ್ಯವಿಲ್ಲ. ಅಲ್ಲದೇ ಮೈಕೈ ನೋವು ಬಂದರೆ ಅರ್ಧ ಅಥವಾ ಒಂದು ದಿನ ವಿಶ್ರಾಂತಿ ತೆಗೆದುಕೊಂಡು ಶಮನ ಮಾಡಿಕೊಳ್ಳಬಹುದು ಎಂದು ಹೇಳಿದರು.
ದ.ಕ.ಜಿಪಂ ಸಿಇಒ ಮಾತನಾಡಿ, ಕೋವಿಡ್ ಲಸಿಕೆ ಪಡೆದುಕೊಳ್ಳಲು ಜಿಲ್ಲಾ ಪಂಚಾಯತ್ ನಿಂದಲೇ ಟಾಸ್ಕ್ ಫೋರ್ಸ್ ಸಮಿತಿಯನ್ನು ಜಿಲ್ಲಾ ಪಂಚಾಯತ್ ಸದಸ್ಯರೇ ಮಾಡಿ, 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಪಡೆದುಕೊಳ್ಳಲು ಪ್ರೇರಣೆ ನೀಡಬೇಕು ಎಂದು ಹೇಳಿದರು.