ಮಂಗಳೂರು : ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಮತ್ತೊಂದು ಕಾಲೇಜಿನ ಯುವಕರು ಹಲ್ಲೆ ನಡೆಸಿ ಗೂಂಡಾಗಿರಿ ಮೆರೆದಿರುವ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, "ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ, ಖಾಸಗಿ ಫ್ಲಾಟ್ನಲ್ಲಿ ಕೂಡಿ ಹಾಕುವ ಜೊತೆಗೆ ಮನಬಂದಂತೆ ಯುವಕರ ಗುಂಪು ಥಳಿಸಿದೆ. ಗಾಂಜಾ ನಶೆಯಲ್ಲಿ ವಿದ್ಯಾರ್ಥಿ ಮೇಲೆ ರಕ್ತ ಹೆಪ್ಪುಗಟ್ಟುವಂತೆ ದಾಳಿ ನಡೆಸಲಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ (18) ಥಳಿತಕ್ಕೋಳಗಾದ ವಿದ್ಯಾರ್ಥಿಯಾಗಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.
ಆರೋಪಿಯಿಂದ ಆಟಿಕೆ ಪಿಸ್ತೂಲ್ ವಶಕ್ಕೆ : ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ್ದ ಹಿನ್ನೆಲೆ ನ್ಯಾಯಂಗ ಬಂಧನದಲ್ಲಿದ್ದ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ಪಡೆದು ಆತನಿಂದ ಎರಡು ಮೊಬೈಲ್ ಸೆಟ್, ಕಾರಿನ ಕೀ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಟಿಕೆ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಏನಿದು ಘಟನೆ?: ಮೇ 12 ರಂದು ನಗರದ ಅತ್ತಾವರ ಸ್ಪರ್ಷ ರಸ್ತೆಯಲ್ಲಿರುವ ಮ್ಯಾಕ್ ಅಪಾರ್ಟ್ಮೆಂಟ್ನಲ್ಲಿದ್ದ ಮಜೀಬ್ ಸೈಯದ್ ಅವರನ್ನು ಅವರ ಪರಿಚಯಸ್ಥ ಸೌಪಾಲ್ ಮತ್ತು ಪುಚ್ಚ ಎಂಬುವರು ಅಪಹರಿಸಿ, ಪಿಸ್ತೂಲ್ ತೋರಿಸುವ ಮೂಲಕ ಮುಜೀಬ್ ಸೈಯದ್ ಅವರಿಂದ 5,00,000 ರೂಪಾಯಿ ಮತ್ತು ಒಂದು ಕಾರು ನೀಡುವಂತೆ ಒತ್ತಡ ಹೇರಿದ್ದರು. ಇದಕ್ಕೆ ನಿರಾಕರಿಸಿದಾಗ ಮುಜೀಬ್ ಉಪಯೋಗಿಸುತ್ತಿದ್ದ ಕಾರು, ಮೊಬೈಲ್ ಸೆಟ್, 18,000 ರೂಪಾಯಿ ಹಾಗೂ ಮಜೀಬ್ ಮಗಳ ಕೈಯ್ಯಲ್ಲಿದ್ದ ಮೊಬೈಲ್ ಸೆಟ್ ಸುಲಿಗೆ ಮಾಡಿದ್ದರು. ಬಳಿಕ, ಮುಜೀಬ್ ಸೈಯದ್ನನ್ನು ಎಸ್. ಎಲ್ ಮಥಾಯಸ್ ರಸ್ತೆ, ಪಳ್ನೀರ್, ಕಂಕನಾಡಿ, ಪಂಪುವೆಲ್, ಉಜೋಡಿ, ಜಪ್ಪಿನಮೊಗರು, ಕರ್ಬಿಸ್ಥಾನ ರಸ್ತೆ ಮುಂತಾದ ಕಡೆಗಳಲ್ಲಿ ಸುತ್ತಾಡಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವಾಜ್ ಹಾಕಿ ಪರಾರಿಯಾಗಿದ್ದರು.
ಘಟನೆ ಬಗ್ಗೆ ಮುಜೀಬ್ ಸೈಯದ್ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ, ಸುಲಿಗೆ ಮಾಡಿದ್ದ ಕಾರನ್ನು ಮಂಗಳೂರು ನಗರದ ನ್ಯೂಚಿತ್ರಾ ಜಂಕ್ಷನ್ ಬಳಿ ವಶಪಡಿಸಿಕೊಂಡಿದ್ದಾರೆ. ಬಳಿಕ, ನ್ಯಾಯಾಲಯದ ಆದೇಶದಂತೆ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ : ಮಾರಕಾಸ್ತ್ರಗಳೊಂದಿಗೆ ಗ್ರಾಮಕ್ಕೆ ನುಗ್ಗಿದ ಪುಡಿ ರೌಡಿಗಳು : ಪುಂಡರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನರು
ಇನ್ನು ಕೇಸ್ಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ನೌಫಾಲ್ ಎಂಬಾತನನ್ನು ಆಗಸ್ಟ್ 24 ರಂದು ಮಂಗಳೂರು ದಕ್ಷಿಣ ಠಾಣಾ ಪೊಲೀಸ್ ನಿರೀಕ್ಷಕರಾದ ಲೋಕೇಶ್ ಎ.ಸಿ ಕಸ್ಟಡಿಗೆ ಪಡೆದು ಕೂಲಂಕಷವಾಗಿ ವಿಚಾರಿಸಿದಾಗ ಸುಲಿಗೆ ಮಾಡಿದ ಎರಡು ಮೊಬೈಲ್ ಸೆಟ್, ಕಾರಿನ ಕೀ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಟಿಕೆ ಪಿಸ್ತೂಲ್ ಅನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ಹೇಳಿದ್ದು, ಅವುಗಳನ್ನು ಆಗಸ್ಟ್ 25 ರಂದು ಪೊಲೀಸರು ವಶಪಡಿಸಿಕೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರದ ಪಡೀಲ್ ನಾಗುರಿಯ ಮೊಹಮ್ಮದ್ ನಿಶಾಕ್ ಯಾನೆ ಪುಚ್ಚ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.