ಮಂಗಳೂರು : ಕೊರೊನಾ ಲಾಕ್ಡೌನ್ ಬಳಿಕ ಸಂಪೂರ್ಣ ಸ್ತಬ್ಧವಾಗಿರುವ ಸರ್ಕಾರಿ ಸಾರಿಗೆ ಸೇವೆ ಅನ್ಲಾಕ್ ಬಳಿಕ ಮತ್ತೆ ಎಂದಿನಂತೆ ಆರಂಭಗೊಳ್ಳಲಿವೆ. ಆದರೆ, ಖಾಸಗಿ ಬಸ್ ಮಾಲೀಕರಿಗೆ ಅನ್ಲಾಕ್ ಘೋಷಣೆಯಾದರೂ ತಲೆನೋವು ಎಂಬಂತಾಗಿದೆ.
ಪ್ರತಿನಿತ್ಯ ಏರಿಕೆ ಕಾಣುತ್ತಿರುವ ತೈಲ ಬೆಲೆ ಖಾಸಗಿ ಬಸ್ ಮಾಲೀಕರ ನಿದ್ದೆಗೆಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1000ಕ್ಕೂ ಅಧಿಕ ಖಾಸಗಿ ಬಸ್ಗಳು ನಗರ ಮತ್ತು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳ ನಡುವೆ ಓಡಾಟ ಮಾಡುತ್ತಿವೆ. ಕಳೆದ ಬಾರಿಯ ಅನ್ಲಾಕ್ ಸಂದರ್ಭದಲ್ಲಿ ಓಡಾಟ ಆರಂಭವಾದಾಗ ಪ್ರಯಾಣಿಕರ ಕೊರತೆಯಿಂದ ನಷ್ಟ ಅನುಭವಿಸಿದ್ದರು.
ಅನ್ಲಾಕ್ ಆದರೆ ಮುಂದೇನು?
ಬೆಳಗ್ಗೆ ಮತ್ತು ಸಂಜೆ ವೇಳೆಗೆ ಮಾತ್ರ ತುಂಬುವ ಬಸ್ಗಳು ಉಳಿದ ಸಂದರ್ಭದಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಓಡಾಟ ನಡೆಸಬೇಕಾಗಿತ್ತು. ಆದರೂ ಪ್ರಯಾಣಿಕರಿಗೆ ಅನಾನುಕೂಲವಾಗಬಾರದು ಎಂಬ ದೃಷ್ಟಿಯಿಂದ ಖಾಸಗಿ ಬಸ್‌ಗಳ ಓಡಾಟ ನಿರಂತರವಾಗಿತ್ತು. ಆದರೆ, ಈ ಬಾರಿಯ ಕೊರೊನಾ ಅನ್ಲಾಕ್ ಬಳಿಕ ಬಸ್ ಓಡಾಟ ಪುನಾರಂಭಿಸುವ ಬಗ್ಗೆ ಬಸ್ ಮಾಲೀಕರಲ್ಲಿ ಗೊಂದಲ ಉಂಟಾಗಿದೆ. ಅನ್ಲಾಕ್ ಆದರೆ ಬಸ್ ರಸ್ತೆಗಿಳಿಸಬೇಕು ಎನ್ನುವಂತಿದ್ದರೆ ತೈಲ ಬೆಲೆ ಅವರನ್ನೆಲ್ಲ ಕಂಗೆಡಿಸಿದೆ.
ಕಳೆದ ಜೂನ್ನಲ್ಲಿ 65 ರೂಪಾಯಿ ಇದ್ದ ಡೀಸೆಲ್ ಬೆಲೆ ಇದೀಗ 92 ರೂಪಾಯಿಗೆ ಬಂದು ಮುಟ್ಟಿದೆ. ಈಗಿನ ಡೀಸೆಲ್ ಬೆಲೆಯಲ್ಲಿ ಬಸ್‌ಗಳ ಓಡಾಟ ಅಸಾಧ್ಯ ಎನ್ನುತ್ತಾರೆ ಬಸ್ ಮಾಲೀಕರು. ಕಳೆದ ಅನ್ಲಾಕ್ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ತೆರಿಗೆ ವಿನಾಯತಿಗಾಗಿ ಆಗ್ರಹಿಸಿದ್ದರು. ಆದರೆ, ಆ ಬೇಡಿಕೆ ಈಡೇರಿರಲಿಲ್ಲ. ಈ ಬಾರಿ ಬಸ್ ಓಡಾಟ ನಡೆಸಲು ಕನಿಷ್ಠ 6 ತಿಂಗಳವರೆಗಿನ ತೆರಿಗೆ ವಿನಾಯಿತಿ ನೀಡಬೇಕು ಮತ್ತು ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಅವಕಾಶ ನೀಡಬೇಕು ಎನ್ನುವುದು ಬಸ್ ಮಾಲೀಕರ ಆಗ್ರಹವಾಗಿದೆ.