ಸುಳ್ಯ (ದಕ್ಷಿಣ ಕನ್ನಡ) : ಬೆಳ್ಳಾರೆಯ ಹಿಂದೂ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಾಪತ್ತೆಯಾಗಿರುವ ಆರೋಪಿಗಳಿಗೆ ಶೋಧ ತೀವ್ರಗೊಳಿಸಿದೆ. ಇಂದು (ಬುಧವಾರ) ಸುಳ್ಯ ನಗರದ ಬೀದಿಗಳಲ್ಲಿ ಈ ಬಗ್ಗೆ ಧ್ವನಿವರ್ಧಕ ಬಳಸಿ ಪ್ರಕಟಣೆ ಹೊರಡಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಜೂನ್ 30ರೊಳಗೆ ಶರಣಾಗದೇ ಇದ್ದಲ್ಲಿ ಅವರ ಮನೆಗಳನ್ನು ಮುಟ್ಟುಗೋಲು ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಎನ್‌ಐಎ ನ್ಯಾಯಾಲಯದ ಅಧಿಕಾರಿಗಳು ಹಾಗೂ ಸುಳ್ಯದ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಳಿವು ಕೊಟ್ಟಲ್ಲಿ ನಗದು ಬಹುಮಾನ ನೀಡಲಾಗುವುದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸುಳ್ಯದ ಕಲ್ಲುಮುಟ್ಲುನಲ್ಲಿ ವಾಸವಿದ್ದ ಆರೋಪಿ ಉಮ್ಮರ್ ಫಾರೂಕ್ ಮನೆಗೂ ಹೋಗಿ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿ ಬಂದಿದ್ದಾರೆ. ನಿನ್ನೆಯೂ ಬೆಳ್ಳಾರೆಯಲ್ಲಿ ಧ್ವನಿವರ್ಧಕದ ಮೂಲಕ ಎನ್‌ಐಎ ನ್ಯಾಯಾಲಯದ ಆದೇಶವನ್ನು ಘೋಷಿಸಿ ಆರೋಪಿ ಮುಸ್ತಫ ಎಂಬಾತನ ಮನೆಗೂ ಆದೇಶ ಪ್ರತಿ ಅಂಟಿಸಲಾಗಿದೆ.
ಎನ್ಐಎ ಅಧಿಕಾರಿಗಳು ಈ ಹಿಂದೆ ಆರೋಪಿಗಳ ಫೋಟೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಆರೋಪಿಗಳ ಪತ್ತೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ನಡೆದು 11 ತಿಂಗಳು ಕಳೆದುಹೋಗಿದ್ದು ಎನ್ಐಎ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಇಷ್ಟೇ ಅಲ್ಲದೇ, ಎನ್ಐಎ ಚೆನ್ನೈ ವಿಭಾಗದ ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದ 3 ಮಂದಿ ಅಧಿಕಾರಿಗಳ ತಂಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರದಂದು ದಾಳಿ ನಡೆಸಿ ತೆರಳಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಂಗಡಿ ಗ್ರಾಮದ ಪೊಯ್ಯೆ ಗುಡ್ಡೆ ಎಂಬಲ್ಲಿನ ನೌಶಾದ್ ಎಂಬಾತನ ಮನೆಗೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಆತ ಮನೆಯಲ್ಲಿ ಇರಲಿಲ್ಲ. ಬಳಿಕ ಅಧಿಕಾರಿಗಳು ಮಹಜರು ನಡೆಸಿ ತೆರಳಿದ್ದಾರೆ. ನೌಶಾದ್ ಈ ಹಿಂದೆ ಉಡುಪಿಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಳಿಕ ಊರಿನಲ್ಲೇ ಲಾರಿ ಚಾಲಕ ವೃತ್ತಿ ಮಾಡಿಕೊಂಡಿದ್ದ.
ಈತ ಪಿಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಈತನಿಗಾಗಿ ಹುಡುಕಾಟ ನಡೆಸುತ್ತಿದೆ. ಇದೀಗ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ನೌಶಾದ್ ಬಗ್ಗೆ ಮನೆಮಂದಿಯಲ್ಲಿ ವಿಚಾರಿಸಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : NIA RAID: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ.. ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳಲ್ಲಿ ಎನ್ಐಎ ದಾಳಿ