ಪುತ್ತೂರು/ಮಂಗಳೂರು: ಮಳೆ ಹಿನ್ನೆಲೆಯಲ್ಲಿ ಸುಗಮ ವಿದ್ಯುತ್ ಸರಬರಾಜಿಗೆ ಮರ ಕಡಿಯುತ್ತಿದ್ದಾಗ ದುರಂತ ಸಂಭವಿಸಿದೆ. ಕುಂಬ್ರ ಸಮೀಪದ ಪರ್ಪುಂಜದಲ್ಲಿ ಮರದ ಗೆಲ್ಲು ಕಡಿಯುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿದ್ದು ಮೆಸ್ಕಾಂ ಪವರ್‌ಮ್ಯಾನ್ ಮೃತಪಟ್ಟಿದ್ದಾರೆ.
ಮೆಸ್ಕಾಂ ಕುಂಬ್ರ ಶಾಖೆಯ ಪವರ್‌ಮ್ಯಾನ್ ಬಸವರಾಜ್ (26) ಮೃತರು. ಮೂಲತಃ ವಿಜಯಪುರ ನಿವಾಸಿಯಾಗಿದ್ದು, ಕೆಲ ತಿಂಗಳಿಂದ ಮೆಸ್ಕಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ನಂದಿನಿ ನದಿಗೆ ಹಾರಿ ನಾಪತ್ತೆ: ಮಂಗಳೂರು ನಗರದಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಗರದ ಹೊರವಲಯದ ಪಾವಂಜೆಯಲ್ಲಿರುವ ನಂದಿನಿ ನದಿಗೆ ಹಾರಿ ನಾಪತ್ತೆಯಾಗಿದ್ದಾರೆ. ಮಂಡ್ಯ ಮೂಲದ ರಾಕೇಶ್ ಗೌಡ ನದಿಗೆ ಹಾರಿದ ವ್ಯಕ್ತಿ, ಪ್ರಸ್ತುತ ಮಂಗಳೂರಿನ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ನಗರದ ನ್ಯಾಯಾಲಯದ ಅಂಚೆ ಕಚೇರಿಯಲ್ಲಿ ಜಿಡಿಎಸ್ ಪ್ಯಾಕರ್ ಆಗಿದ್ದು, ಕಳೆದ ಮೂರು ದಿನದಿಂದ ರಜೆಯಲ್ಲಿದ್ದರು.
ರಾಕೇಶ್ ತನ್ನ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಬೈಕ್ನಲ್ಲಿ ಇಟ್ಟು ನದಿಗೆ ಹಾರಿದ್ದಾರೆ. ಅಲ್ಲದೆ ತಾನು ನದಿಗೆ ಹಾರುತ್ತಿರುವ ಬಗ್ಗೆ ಸಂಬಂಧಿಕರಿಗೆ ವಾಟ್ಸ್ಆ್ಯಪ್ನಲ್ಲಿ ಮಾಹಿತಿ ನೀಡಿ ನದಿಯಿರುವ ಪ್ರದೇಶದ ಲೊಕೇಷನ್ ಕೂಡಾ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಳ: ಪ್ರವಾಹದ ಭೀತಿಯಿಂದ ಮನೆ ಖಾಲಿ ಮಾಡುತ್ತಿರುವ ಜನ