ಮಂಗಳೂರು: ಪೋರ್ಚುಗೀಸ್ ಹಾಗೂ ಆಳುಪ ಅರಸರಿಗೆ ಸೇರಿರುವ ಸಾಧ್ಯತೆಯುಳ್ಳ ಶಿಲಾಶಾಸನವೊಂದು ನಗರದ ಹೊಯ್ಗೆ ಬಜಾರ್ ಮೀನುಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಪತ್ತೆಯಾಗಿದೆ.
ಒಂದು ಶಿಲಾಶಾಸನವು 5.5 ಅಡಿ ಉದ್ದ ಹಾಗೂ 1.5 ಅಡಿ ಅಗಲವಿದೆ. ಈ ಶಿಲಾಶಾಸನ ಸುಮಾರು 11 ಶತಮಾನದಷ್ಟು ಹಳೆಯದಿರಬಹುದೆಂದು ಮೇಲ್ನೋಟಕ್ಕೆ ತಿಳಿದು ಬರುತ್ತಿದ್ದು, 11 ಸಾಲುಗಳಿರುವ ಇದು ಹಳೆಯ ಕನ್ನಡ ಲಿಪಿಯನ್ನು ಹೋಲುತ್ತಿದೆ. ಇದರ ಅಕ್ಷರಗಳು ಮಾಸಿ ಹೋಗಿದ್ದು, ದಾನಶಾಸನವಾಗಿರುವ ಸಾಧ್ಯತೆ ಇದೆ. ಮತ್ತೊಂದು ಶಿಲಾಶಾಸನವು ಪೋರ್ಚುಗೀಸ್ ಹಾಗೂ ಆಂಗ್ಲ ಲಿಪಿಯಲ್ಲಿದ್ದು, ಇದರ ಮೇಲೆ ಇನ್ನಷ್ಟೇ ಅಧ್ಯಯನ ಹಾಗೂ ಪರಿಶೀಲನೆ ನಡೆಯಬೇಕಿದೆ.
ಈ ಕುರಿತು ಮಾತನಾಡಿದ ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಎ.ಟಿ.ರಾಮಚಂದ್ರ ನಾಯಕ್, ನಗರದಲ್ಲಿ ಸ್ಮಾರ್ಟ್ ಸಿಟಿ ಲಿ. ಕೌಶಲ್ಯ ಅಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಕಳೆದ ಏಪ್ರಿಲ್ - ಮೇ ಸಂದರ್ಭ ಹಳೆಯ ತರಬೇತಿ ಕೇಂದ್ರವನ್ನು ಕೆಡವಲಾಯಿತು. ಈ ಸಂದರ್ಭ ನೂತನ ತರಬೇತಿ ಕೇಂದ್ರಕ್ಕೆ ತಳಪಾಯವನ್ನು ಅಗೆಯುತ್ತಿರುವ ಸಂದರ್ಭದಲ್ಲಿ ಈ ಶಿಲಾಶಾಸನಗಳು ಪತ್ತೆಯಾಗಿವೆ. ಅದನ್ನು ಕಟ್ಟಡ ನಿರ್ಮಾಣದ ವೇಳೆ ಬದಿಯಲ್ಲಿ ಹಾಕಲಾಗಿತ್ತು. ಈ ಬಗ್ಗೆ ಯಾರೂ ಹೆಚ್ಚು ಕುತೂಹಲ ವ್ಯಕ್ತಪಡಿಸಿರಲಿಲ್ಲ. ಆದರೆ ಇತ್ತೀಚೆಗೆ 3ನೇ ವರ್ಷದ ವಿದ್ಯಾರ್ಥಿ ಶ್ರೇಯಸ್ ಎಂಬುವವರು ಈ ಶಿಲಾಶಾಸನವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಮೀನುಗಾರಿಕಾ ವಿ ವಿ ಡೀನ್ ಡಾ.ಸೆಂಥಿಲ್ ವೇಲ್ ಅವರ ಗಮನ ಸೆಳೆದರು ಎಂದರು.
ಇದನ್ನೂ ಓದಿ: ಲಾಕ್‌ಡೌನ್ ಬೇಡ ಅಂದ್ರೆ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ: ಬಿಎಸ್ವೈ
ತಕ್ಷಣ ಶಿಲಾಶಾಸನಗಳ ಫೋಟೋಗಳನ್ನು ಅವರು ಪ್ರಧಾನಮಂತ್ರಿ ಕಚೇರಿಗೆ ಇಮೇಲ್ ಮೂಲಕ ರವಾನಿಸಿದ್ದರು. ಅಲ್ಲಿಂದ ಈ ಬಗ್ಗೆ ಪುರಾತತ್ವ ಇಲಾಖೆ ಮೈಸೂರು ವಿಭಾಗದ ಸಹಾಯಕ ತಜ್ಞರಿಗೆ ಸಂಶೋಧನೆ ಹಾಗೂ ಅಧ್ಯಯನ ನಡೆಸಲು ಸೂಚನೆ ನೀಡಲಾಗಿತ್ತು. ಅದರಂತೆ ಇಂದು ಶಾಸನ ತಜ್ಞರು ಹಾಗೂ ಸಿಬ್ಬಂದಿ ಆಗಮಿಸಿ ಶಾಸನಗಳ ಪಡಿಯಚ್ಚು ಸಂಗ್ರಹಿಸಿದ್ದಾರೆ. ಅದರ ವರದಿಯನ್ನು ಇಂಡಿಯನ್ ಎಪಿಗ್ರಾಫಿಯಾ ವಾರ್ಷಿಕ ವರದಿಯಲ್ಲಿ ಪ್ರಕಟಿಸಲಾಗುತ್ತದೆ. ಶಾಸನಗಳನ್ನು ಮೀನುಗಾರಿಕಾ ಕಾಲೇಜಿನಿಂದಲೇ ಸಂರಕ್ಷಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು.