ಮಂಗಳೂರು: ನಗರ ಪೋಲಿಸರು ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) (www.ceir.gov.in) ಮೂಲಕ ಕಳೆದು ಹೋದ, ಸುಲಿಗೆಯಾಗಿದ್ದ 93 ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ಇಂದು ಹಸ್ತಾಂತರಿಸಿದ್ದಾರೆ. ಜನರಿಗೆ ಇಂದು ಸ್ಮಾರ್ಟ್ ಫೋನ್ ಅವಶ್ಯಕ ವಸ್ತುವಾಗಿದೆ. ಯಾವುದೋ ಕಾರಣದಿಂದ ಈ ಮೊಬೈಲ್ ಫೋನ್ಗಳು ಕಳೆದುಹೋಗುವುದು, ಕಳ್ಳತನವಾಗುವುದು ನಡೆಯುತ್ತಿರುತ್ತದೆ. ಈ ಮೊಬೈಲ್ ಫೋನ್ಗಳು ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ ಫೋನ್ ಕಳೆದುಕೊಂಡವರಲ್ಲಿ ಆತಂಕ ಹೆಚ್ಚಿರುತ್ತದೆ. ಈ ರೀತಿ ಆತಂಕಗೊಂಡವರಿಗೆ CEIR ಪೋರ್ಟಲ್ ನೆಮ್ಮದಿ ತಂದಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಆಗಿದ್ದ 93 ಮೊಬೈಲ್ ಫೋನ್ಗಳನ್ನು ಸಿಐಇಆರ್ ಪೋರ್ಟಲ್ ತಂತ್ರಜ್ಞಾನದ ಸಹಾಯದಿಂದ ಪತ್ತೆ ಹಚ್ಚಲಾಗಿದೆ. ಈ ಫೋನ್ಗಳನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಇಂದು ವಾರಸುದಾರರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಇಲ್ಲಿಯವರೆಗೆ ಮಂಗಳೂರು ನಗರದಲ್ಲಿ ಕಳೆದುಹೋದ, ಸುಲಿಗೆಯಾದ 2,133 ಮೊಬೈಲ್ ಫೋನ್ಗಳ ಪತ್ತೆಗೆ ಸಿಐಇಆರ್ ಪೋರ್ಟಲ್ ನಲ್ಲಿ ಐಎಂಇಐ ಬ್ಲಾಕ್ಗೆ ಕೋರಿಕೆ ಸಲ್ಲಿಕೆಯಾಗಿತ್ತು. ಇವುಗಳಲ್ಲಿ 524 ಫೋನ್ಗಳು ಪತ್ತೆಯಾಗುವ ಮಾಹಿತಿಯಿದೆ. ಸದ್ಯ 240 ಮೊಬೈಲ್ ಫೋನ್ಗಳು ಪತ್ತೆಯಾಗಿದ್ದು, ಈಗಾಗಲೇ 147 ಫೋನ್ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಇಂದು 93 ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ನೀಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಕಳೆದುಹೋದ ಮೊಬೈಲ್ ಫೋನ್ಗಳು ದುರುಪಯೋಗವಾಗದಂತೆ ಅನ್ ಬ್ಲಾಕ್ ಮಾಡಲು CEIR ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಮೊಬೈಲ್ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಸ್ವತಃ ತಾವೇ ಕೆಎಸ್ಪಿ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದು. ಬಳಿಕ (www.celr.gov.in) ಪೋರ್ಟಲ್ನಲ್ಲಿ ಕಳೆದು ಹೋಗಿರುವ ಮೊಬೈಲ್ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೇ ಬ್ಲಾಕ್ ರಿಕ್ವೆಸ್ಟ್ಗೆ ನೇರವಾಗಿ ಸಲ್ಲಿಸಬಹುದು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲೂ ಬ್ಲಾಕ್ ರಿಕ್ವೆಸ್ಟ್ಗೆ ದೂರು ನೀಡಬಹುದು. ಈ ಮೂಲಕ ಪೊಲೀಸರು ಇದರ ಜಾಡು ಹಿಡಿದು ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಿದ್ದಾರೆ.
ಕಳೆದು ಹೋಗಿದ್ದ ಮೊಬೈಲ್ ಅನ್ನು ಮರಳಿ ಪಡೆದ ನವ್ಯಾ ಮಾತನಾಡಿ, 2022ರ ಡಿಸೆಂಬರ್ 18 ರಂದು ನನ್ನ ಮೊಬೈಲ್ ಕಳೆದುಹೋಗಿತ್ತು. ನಗರದ ಧಕ್ಕೆಯಲ್ಲಿ ಮೊಬೈಲ್ ಕಳೆದುಕೊಂಡಿದ್ದೆ. ಮನೆಗೆ ಹೋಗಿ ನೋಡಿದಾಗ ಮೊಬೈಲ್ ಕಳೆದುಹೋಗಿದ್ದು ಗೊತ್ತಾಗಿತ್ತು. ಆ ನಂಬರ್ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಐದು ತಿಂಗಳ ನಂತರ ನನ್ನ ಮೊಬೈಲ್ ವಾಪಸ್ ಸಿಕ್ಕಿದೆ. ಮಂಗಳೂರು ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು “SAY HI TO WHATSAPP" ಎಂಬ CHAT HOT ಜಾರಿಗೆ ತಂದಿದ್ದು, ಇದರಲ್ಲಿ ದೂರುದಾರರು " 8277949183 ನಂಬರಿಗೆ - HI" ಎಂದು ಮೆಸ್ಸೇಜ್ ಕಳುಹಿಸಿದ ನಂತರ ಒಂದು GOOGLE FORM ಲಿಂಕ್ ತೆರೆದುಕೊಳ್ಳುತ್ತದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಅದರಲ್ಲಿ ದೂರುದಾರರು ಕಳೆದುಹೊದ ಮೊಬೈಲ್ನ ಮಾಹಿತಿಯನ್ನು ದಾಖಲಿಸಬಹುದಾಗಿದೆ.
ಇದನ್ನೂ ಓದಿ:ಸುರತ್ಕಲ್ನ ಎನ್ಐಟಿಕೆಯಲ್ಲಿದೆ ಉದ್ಯೋಗಾಕಾಶ; 107 ಬೋಧಕ ಹುದ್ದೆಗೆ ಅರ್ಜಿ ಆಹ್ವಾನ