ಬಂಟ್ವಾಳ (ದಕ್ಷಿಣ ಕನ್ನಡ): ದನ ಕಳವು ಮಾಡುತ್ತಿದ್ದ ಕಳ್ಳರನ್ನು ಹಿಡಿಯಲು ಹೊರಟ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸರಿಗೆ ದೊಡ್ಡ ಪ್ರಮಾಣದ ಕಸಾಯಿಖಾನೆಯೇ ದೊರಕಿದೆ.
ಸುಮಾರು 200 ದನಗಳ ಚರ್ಮ, 8 ಗೋವುಗಳ ಸಹಿತ ಹಲವು ವಾಹನಗಳನ್ನೂ ವಶಕ್ಕೆ ಪಡೆದಿರುವ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಸಾಲೆತ್ತೂರು ಎಂಬಲ್ಲಿನ ಕೊಳ್ನಾಡು ಕಟ್ಟತ್ತಿಲ ಮಠ ನಿವಾಸಿ ಹಾರಿಸ್ ಯಾನೇ ಮಹಮ್ಮದ್ ಹಾರೀಸ್ (22) ಬಂಧಿತ ಆರೋಪಿ. ದನ ಕಳ್ಳತನದ ಮಾಹಿತಿಯನ್ನು ಆಧರಿಸಿ ಪೊಲೀಸರ ತಂಡ ಕೊಳ್ನಾಡಿನ ಮನೆಯೊಂದಕ್ಕೆ ದಾಳಿ ನಡೆಸಿತು.
ಬಳಿಕ ಮಾಹಿತಿ ಆಧಾರದಲ್ಲಿ ಸಾಲೆತ್ತೂರು ಐತ್ತಕುಮೇರು ಭಾಗಕ್ಕೆ ಪೊಲೀಸ್ ತಂಡ ದಾಳಿ ನಡೆಸಿತು. ಈ ವೇಳೆ 8 ಗೋವು, 200 ದನಗಳ ಚರ್ಮ ಸ್ಥಳದಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಕಸಾಯಿಖಾನೆ ನಡೆಸಲು ಬಳಸಿದ್ದರೆನ್ನಲಾದ ನಾಲ್ಕು ದಿಚಕ್ರ ವಾಹನ, ಅಟೋ, ಅಕೋಶ್ ಲೈಲಾಂಡ್ ದೋಸ್ತು ವಾಹನ ಸೇರಿ ಮಾಂಸ ಮಾಡಲು ಬಳಸುವ ಸಾಮಾಗ್ರಿಗಳನ್ನು ಸ್ಥಳದಿಂದ ವಶಕ್ಕೆ ಪಡೆದುಕೊಳ್ಳಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗೋ ಕಳ್ಳತನದ ಪ್ರಕರಣಗಳಿಗೂ ಇದಕ್ಕೂ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ವೆಲೆಂಟನ್ ಡಿಸೋಜ್, ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಮಾರ್ಗದರ್ಶನದಲ್ಲಿ ವಿಟ್ಲ ಉಪನಿರೀಕ್ಷಕ ವಿನೋದ್ ಎಸ್. ಕೆ. ಅವರನ್ನೊಳಗೊಂಡ ಪೊಲೀಸ್ ಸಿಬ್ಬಂದಿಗಳಾದ ಜಯರಾಮ ಕೆ. ಟಿ., ಪ್ರತಾಪ ರೆಡ್ಡಿ, ವಿಶ್ವನಾಥ, ಶಂಕರ್, ಅಶೋಕ, ಹೇಮರಾಜ, ಡ್ಯಾನಿ ತ್ರಾವೋ, ವಿನೋದ್, ವಿಠಲ ಮತ್ತಿತರರ ತಂಡ ಕಾರ್ಯಾಚರಣೆ ನಡೆಸಿತು.