ಮಂಗಳೂರು: ಕೊಲೆ ಯತ್ನ ಪ್ರಕರಣ ಸಂಬಂಧ ಸ್ಥಳ ಮಹಜರಿಗೆ ಕೊಂಡೊಯ್ಯುತ್ತಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ ಮಾಡಲಾಗಿದೆ. ಮಂಗಳೂರಿನ ಮಿಸ್ತ ಯಾನೆ ಮುಸ್ತಾಕ್ (26) ಎಂಬಾತನೇ ಗುಂಡೇಟಿಗೆ ಗುರಿಯಾದ ಆರೋಪಿ. ಆರೋಪಿಯನ್ನು ಆಗಸ್ಟ್ 19ರಂದು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು.
ಪ್ರಕರಣದ ಸ್ಥಳ ಮಹಜರು ನಡೆಸಲು ಸೋಮವಾರ ಘಟನೆ ನಡೆದ ಮಂಗಳೂರು ತಾಲೂಕಿನ ಕಂಬಳ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮುಸ್ತಾಕ್ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ವಿನಾಯಕ ಬಾವಿಕಟ್ಟೆ, ಪೊಲೀಸ್ ಕಾನ್ಸ್ಟೇಬಲ್ ಸದ್ದಾಂ ಹುಸೈನ್ ಎಂಬುವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಆರೋಪಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಆತನ ಕಾಲಿಗೆ ತಗುಲಿದೆ. ಆರೋಪಿ ಮತ್ತು ಗಾಯಾಳು ಪೊಲೀಸ್ ಸದ್ದಾಂ ಹುಸೇನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಮೇಲೆ ಕಳ್ಳತನ, ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಅಡ್ಯಾರ್ ಹರೇಕಳ ಭಾಗದಲ್ಲಿ ಗಾಂಜಾ ಸೇವನೆ ಮಾಡಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬನ ಮೊಬೈಲ್ ಕಿತ್ತುಕೊಂಡ ವಿಚಾರದಲ್ಲಿ ವಿದ್ಯಾರ್ಥಿಯ ಮಾವ ಆರೋಪಿಯಲ್ಲಿ ವಿಚಾರಿಸಿದಾಗ ಆತ ಡ್ರ್ಯಾಗನ್ನಿಂದ ಹಲ್ಲೆ ನಡೆಸಿದ್ದ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇವರಲ್ಲಿ ಆರೋಪಿ ಮುಸ್ತಾಕ್ನನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು.
ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: ಎರಡು ಕೋಮಿನ ಗುಂಪುಗಳ ನಡುವೆ ಗಲಾಟೆ: ಶಿರಾಳಕೊಪ್ಪದಲ್ಲಿ ಬಿಗುವಿನ ವಾತಾವರಣ ನಿರ್ಮಾಣ