ಮಂಗಳೂರು: ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೊಬೈಲ್ ನಂಬರ್ ಪಡೆದು ಮೆಸೇಜ್ ಮಾಡಿ ಅನುಚಿತವಾಗಿ ವರ್ತಿಸಿದ ಆರೋಪದಡಿ ನಗರದ ಪೊಲೀಸ್ ಠಾಣೆಯೊಂದರ ಹೆಡ್ಕಾನ್ಸ್ಟೇಬಲ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ರಿಕ್ಷಾ ಚಾಲಕನೊಬ್ಬ ಚುಡಾಯಿಸುತ್ತಿರುವ ಬಗ್ಗೆ ಜನವರಿ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ ಬಾಲಕಿಯ ನಂಬರ್ ಪಡೆದುಕೊಂಡು ಮೆಸೇಜ್ ಮಾಡಲು ಆರಂಭಿಸಿದ್ದಾನೆ.
ಅಪ್ರಾಪ್ತ ಬಾಲಕಿಗೆ ಮೆಸೇಜ್ ಮಾಡಿ ಭೇಟಿಯಾಗಬೇಕು, ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ ಎಂಬ ಮೆಸೇಜ್ಗಳನ್ನು ಮಾಡಿ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ್ದು, ಪೋಷಕರು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದ್ದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರ ತಿಳಿಸಿದ್ದು, ಬಾಲಕಿಯ ದೂರನ್ನು ಪಡೆದು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ತಕ್ಷಣ ಆರೋಪಿ ಪೊಲೀಸ್ನನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ.